ಅನುದಿನ ಕವನ-೧೨೭೪, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ: ಒಳ್ಳೆಯದಾಗಲಿ ನಿಮಗೆ

ಒಳ್ಳೆಯದಾಗಲಿ ನಿಮಗೆ

ಅಂದು ನೀವು ನನ್ನ
ಒಬ್ಬಂಟಿಯಾಗಿಸಿ ಬಿಟ್ಟು ನಡೆದಿರಿ….
ಬದುಕಲೇಬೇಕೆಂಬ ಬಲ
ಇನ್ನಷ್ಟು ಗಟ್ಟಿಯಾಯಿತು
ಋಣಿಯಾಗಿರುವೆ ನಿಮಗೆ.

ಅಂದು ನೀವು ನನ್ನ
ಅವಮಾನಿಸದೇ ಇದ್ದರೆ…
ಯಶಸ್ಸಿನ ತುತ್ತ ತುದಿಗೇರಿ
ಎಲ್ಲರ ಮೆಚ್ಚುಗೆ ಗಳಿಸಲಾಗುತ್ತಿತ್ತೇ?
ಧನ್ಯವಾದಗಳು ನಿಮಗೆ.

ಅಂದು ನೀವು ನನ್ನ ಸೋಲಿಗೆ
ಗಹಗಹಿಸಿ ನಕ್ಕಿರಿ…
ಗೆಲುವು ದಕ್ಕುವವರೆಗೂ
ನಿದ್ರೆ ಹತ್ತಲಿಲ್ಲ.
ಕೃತಜ್ಞತೆಗಳು ನಿಮಗೆ.

ಅಂದು ನೀವು ನನ್ನ ನೋವಿಗೆ
ಉಪ್ಪು ಸವರಿದಿರೇ ವಿನಹ
ಸಾಂತ್ವನ ಹೇಳಲಿಲ್ಲ.
ಅವುಡುಗಚ್ಚಿ ತಿಂದ ಯಾತನೆಗಳೆಲ್ಲ
ಸಂಭ್ರಮ ತುಂಬಿ ನಿಂತಿವೆ.
ನಮನಗಳು ನಿಮಗೆ.

ಅಂದು ನೀವು ನನ್ನ
ಹೆಜ್ಜೆ ಹೆಜ್ಜೆಗೂ ತುಳಿಯುತ್ತಲೇ ಹೋದಿರಿ.
ಅಲ್ಯಾರೋ ಎದೆಗೊತ್ತಿಕೊಂಡು ಬೆಳೆಸಿಬಿಟ್ಟರು.
ಕಣ್ದುಂಬಿ ನಮಸ್ಕರಿಸುವೆ ನಿಮಗೆ.

ಇನ್ನಿಲ್ಲವಾಗಿಸುವ ನೂರು ಮನಸುಗಳಿರಬಹುದು.
ಆದರೆ…
ಕಾಯುವ ಜೀವ ಒಂದಾದರೂ ಇದ್ದೇ ಇರುತ್ತದೆ.

ಒಳ್ಳೆಯದಾಗಲಿ ನಿಮಗೆ….!


-ನಾಗೇಶ್ ಜೆ. ನಾಯಕ, ಸವದತ್ತಿ
——