ಅನುದಿನ ಕವನ-೧೨೮೧, ಕವಿ: ಎ.ಎನ್.ರಮೇಶ್, ಗುಬ್ಬಿ.

ಇಲ್ಲಿವೆ ಬದುಕಿನ ಋಣ ಸಂದಾಯದ ಆರು ಹನಿಗವಿತೆಗಳು. ಬಾಳಿನ ಬೆಳಕಿನ ಆರಾಧನೆಯ ಭಾವಪ್ರಣತೆಗಳು. ಇಲ್ಲಿ ಆಳಕ್ಕಿಳಿದಷ್ಟೂ ಅರಿವು ಅಂತಃಕರಣಗಳ ಸಾರವಿದೆ. ಅರ್ಥೈಸಿದಷ್ಟೂ ಜೀವ-ಜೀವನಗಳ ಸಾಫಲ್ಯ, ಸಾರ್ಥಕ್ಯದ ವಿಸ್ತಾರವಿದೆ. ಪಡೆಯುವ, ನೀಡುವ, ನಶ್ವರವಾಗುವ, ನಶ್ವರದಲ್ಲೂ ಶಾಶ್ವತವಿರುವ ಈ ಬುವಿ-ಬದುಕಿನ ಕ್ರಿಯೆ ಪ್ರಕ್ರಿಯೆಗಳಲ್ಲಿ ಏನೆಲ್ಲ ಕರ್ಮವಿದೆ. ಆ ವಿಧಾತನ ಎಷ್ಟೆಲ್ಲ ಮರ್ಮವಿದೆ ಎಂದು ಪ್ರಶ್ನಿಸುತ್ತಾರೆ ಕವಿ ಎ.ಎನ್.ರಮೇಶ್ ಗುಬ್ಬಿ ಅವರು!

1. ಅಮೂಲ್ಯ.!

ತೀರಿಸಬಹುದು
ಕೊಟ್ಟ ಹಣ..
ತೀರಿಸಲಾದೀತೆ
ಸಂಕಷ್ಟದಿ ಮಾಡಿದ
ಸಹಾಯದ ಋಣ.!

2. ಅಸಾಧ್ಯ..!

ಎಷ್ಟಿದ್ದರೇನು ನಮ್ಮ ಆದಾಯ..
ಮಾಡಲಾದೀತೆ ಗಾಳಿ ನೀರು
ಅನ್ನ ಆಸರೆಗಳಿಟ್ಟ ಬುವಿಯ
ಪ್ರೀತಿಯ ಋಣ ಸಂದಾಯ.?

3. ಋಣಾನುಬಂಧ.!

ಗೆಳೆಯ ದಕ್ಕುವುದಕ್ಕು ತೃಣ
ನಮಗೆ ಋಣವಿರಬೇಕು.!
ದಕ್ಕಿದ್ದೆಲ್ಲದಕ್ಕೂ ಕ್ಷಣ ಕ್ಷಣ
ನಾವು ಚಿರಋಣಿಯಿರಬೇಕು.!!

4. ನಮ್ರತೆ.!

ಕೊಡುವವನ ಪ್ರೀತಿ
ಔದಾರ್ಯದ ಮುಂದೆ
ಋಣ ಸಂದಾಯದ
ಒಣಮಾತೇಕೋ ತಂದೆ?
ಮರೆಯದೆ ಮೆರೆಯದೆ
ಶರಣಾದರೆ ಸಾಕು ನಮ್ಮೆದೆ.!

5. ಋಣ ಸಂದಾಯ.!

ಸ್ವಲ್ಪವಾದರೂ ಸಮಾಜಕ್ಕೆ
ಮೀಸಲಿಡಬೇಕು ಆದಾಯ
ಹೇಳುವ ಮುನ್ನ ವಿದಾಯ
ಸಲ್ಲಿಸಬೇಕು ತೃಣದಷ್ಟಾದರೂ
ಬದುಕಿನ ಋಣ ಸಂದಾಯ.!

6. ನಿಯಮ..!

ಮಣವೋ, ಕಣವೋ, ತೃಣವೋ
ಋಣವಿದ್ದರಷ್ಟೇ ಬಾಳ ಸಂಕ್ರಮಣ
ಧರೆಯ ಧಾರಣವಿದ್ದರಷ್ಟೇ ಪ್ರತಿಕ್ಷಣ
ಇಲ್ಲಿ ಬದುಕು ಬೆಳಕಿನ ಪರಿಭ್ರಮಣ.!

-ಎ.ಎನ್.ರಮೇಶ್, ಗುಬ್ಬಿ.