ಒಲವ ಮೊಹರು
ಕಡು ಬಿಸಿಲಿನ ಮರದ ನೆರಳಿಗೆ
ಹೀಗೆ ಎದೆಯ ಸಂಕಟಗಳ ಸುರುವ
ಬಾರದಿತ್ತು ನಾನು;
ಅವಳ ಮರುಳ ಮಾತಿಗೆ ಹೀಗೆ
ಸುಖಾ ಸುಮ್ಮನೆ ಜಾರಬಾರದಾಗಿತ್ತು ನಾನು.
ನಿಮ್ಮ ಎಳೆ ದಳಗಳಿಂದ ಹೀಗೆ ಇರಿ
-ಯ ಬೇಡಿರಿ ಉಪವನದ ಹೂಗಳೇ !
ಹಳೆಯ ಗಾಯ ಮಾಯಲು ಬೇಕು
ಇನ್ನೂ ಒಂದು ಯುಗವೇನೋ ಮರುಳೆ !
ರಾತ್ರಿ ಕಂಡ ಕನಸುಗಳ ಕಣ್ಣೊಳು
ಚೂರು ಉಳಿದಿದೆ ಇನ್ನೂ ಸೂತಕದ ಬಣ್ಣ ಈ ಬೆಳಗಿಗೆ;
ಭಗ್ನ ಸೇತುವೆಯ ಕೆಳಗೆ
ಬಣ್ಣ ಬಣ್ಣದ ಬಿಂಕ ಬಡಿವಾರದ ಸುಣ್ಣದ ನದಿ ನಗೆ.
ದೂರ ದೂರದ ಜೋಡು ಗುಡ್ಡದ ಹೆಗಲೂರಿ
ಮರೆಯಾಗುತಿರುವ ಮುದಿ ಹಗಲು;
ಸಂಜೆ ಊಡುವ ಉಸಿರಿಗಾಗಿ
ಕಣ್ಣು ತೆರೆದೇ ಕಾದು ಕುಳಿತಿರುವ ಕೊಳಲು.
ತೀರದಲೆ ಅಲೆ ಅಲೆಗಳ ಮೇಲೆ
ಹಳೆಯ ಗೆಳತಿಯ ಹೆಸರು;
ಹುಚ್ಚು ಹೊಳೆ ಇಳಿದ ಮೇಲೂ
ದಡದ ಮರಳಿನ ಮೇಲಿದೆ ಇನ್ನೂ
ಈಗ ಅಳಿಸುವುದು ಹೇಗೆ ಆ ಒಲವ ಮೊಹರು.
-ಎಲ್ವಿ(ಡಾ.ಲಕ್ಣ್ಮಣ ವಿಎ) ಬೆಂಗಳೂರು
—–.