ಅನುದಿನ ಕವನ-೧೨೮೮, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ:ಸಂಬಂಧಗಳೇ ಹೀಗೆ…

ಸಂಬಂಧಗಳೇ ಹೀಗೆ…

ಅನುಮಾನದ ಗಾಳಿ ಬೀಸೆ
ಗಂಟಾಗುವವು ಸಂಬಂಧಗಳು
ಅಹಂಕಾರದ ತೊಡರು ಸೊಂಕೆ
ಕಗ್ಗಂಟಾಗುವವು ಸಂಬಂಧಗಳು

ಬಿಡಿಸಿದಷ್ಷೂ ಸಿಕ್ಕಾಗುವವು
ಎಳೆದಾಡಿ ಎಳೆದಾಡಿದಷ್ಟೂ
ಮೈಮನಗಳು ಸೋಲುವವು
ಸಿಕ್ಕುಗಳು ಬೆಟ್ಟವಾಗುವವು

ದಾರ ಹಳತಾದಷ್ಟು ಗಂಟು ಗಟ್ಟಿ
ದ್ವೇಷ ದಪ್ಪವಾಗಿ ಆಗುವುದು ಜಟ್ಟಿ
ಪ್ರೀತಿಯ ಸೂಜಿಗೆ ಕರುಣೆಯ ಕಣ್ಣಿಟ್ಟು
ಬಿಡಿಸಬೇಕು ಜಾಣ್ಮೆಯ‌ ಜತನದಲಿ

ಸೊಕ್ಕಿನ ಸಿಕ್ಕು ಕರಗಿ ಕರಗಿ
ಎಳೆಯ ಮಗುವಿನ ನಗೆಯಂತೆ
ಎಳೆ ಎಳೆಯಾಗಿ ಬಿಚ್ಚುವುದು
ಸಿಡುಕಿನ‌ ಸಿಕ್ಕು.ಎಳೆದಷ್ಟೂ…


-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ