ಅನುದಿನ ಕವನ-೧೨೯೩, ಕವಿ: ವೀರೇಶ ಬ.ಕುರಿ ಸೋಂಪೂರ, ಕೊಪ್ಪಳ, ಕವನದ ಶೀರ್ಷಿಕೆ: ನಲಿ-ಕಲಿ ಮಕ್ಕಳು

ನಲಿ-ಕಲಿ ಮಕ್ಕಳು

ನಲಿ-ಕಲಿ‌ ಮಕ್ಕಳು‌ ನಾವು
ಮುಗ್ಧ ಮನಸಿನ ಜೀವಗಳು.
ಶಾಲೆಯೆಂಬ ತೋಟದಲ್ಲಿ
ಅರಳುವಂತವ ಹೂವುಗಳು.

ಹರುಷದಿ ಬರುವೆವು ಶಾಲೆಗೆ
ಓದು ಬರಹವ ಕಲಿಯಲು.
ಲೆಕ್ಕ, ಆಟ, ಬಿಸಿ-ಬಿಸಿ ಊಟ
ಆಡಿ ಕುಣಿದು ನಲಿಯಲು.

ಚಿತ್ರವ ಬಿಡಿಸಿ, ಬಣ್ಣವ ಹಚ್ಚಿ
ಸಂತಸಪಡುವೆವು ಚಪ್ಪಾಳೆ ತಟ್ಟಿ.
ಕಥೆಗಳ ಕೇಳಿ, ಹಾಡನು ಹೇಳಿ
ಹಿಗ್ಗುವೆವೆಲ್ಲರೂ ಮೇಜನು ಕುಟ್ಟಿ.

ಕಟ್ಟುತ ಕನಸಿನ ಅರಮನೆಯ
ಮೆಟ್ಟಿಲು ಏರುತ ಸಾಗುವೆವು.
ಮುಟ್ಟಾಟವಾಡಲು ಓಡುತ್ತಾ
ಚಿಟ್ಟೆಯ ಚೆಲುವಿಗೆ ಬಾಗುವೆವು.

ಶಾಲೆಯ ಗಂಟೆ ಬಾರಿಸಲು
ಹೊ..ಹೊ…ಎಂದು ಕೂಗುವೆವು.
ಪಾಟಿ ಚೀಲ ಹೆಗಲಿಗೆ ಏರಿಸಿ
ಸೊಯ್ಯನೆ ಮನೆ ಕಡೆ ಸಾಗುವೆವು.


-ವೀರೇಶ ಬ.ಕುರಿ ಸೋಂಪೂರ, ಕೊಪ್ಪಳ
—–