ಅನುದಿನ ಕವನ-೧೨೯೬, ಕವಿ: ಡಾ.ಮಹೇಂದ್ರ ಕುರ್ಡಿ, ಹಟ್ಟಿ, ರಾಯಚೂರು ಜಿಲ್ಲೆ, ಕವನದ ಶೀರ್ಷಿಕೆ: ಜಗದ ಅಕ್ಕ

ಜಗದ ಅಕ್ಕ

ಮನವ ಮಲ್ಲಿಗೆ ಮಾಡಿ
ಮಲ್ಲಿಕಾರ್ಜುನಗೆ ತಾ ಶರಣಾಗಿ
ಮೋಹವ ತೊರೆದು ನಿಂತು
ಶಿವಶರಣೆಯಾದಳು ಅಕ್ಕ.

ಗಿರಿ ಗುಹೆ ಕಾನನದ ನಡುವೆ
ದಿಟ್ಟ ಹೆಜ್ಜೆ ಹಾಕುತಲಿ
ಚೆಲುವಾದ ನವಿಲ ನರ್ತನದಂತೆ
ನಲಿದು ನಡೆದಳು ಸಂತಸದಿ.

ಬೆತ್ತಲೆ ಕಾಯ ನೋಡಿದೊಡೆ
ಕ್ರೂರ ಕಾಮನೆಗಳು ಕೆರಳದಿರಲೆಂದು
ಕೇಶದಿ ತನುವ ಮರೆಮಾಚಿ
ಒಳಗಣ್ಣ ತೆರೆಸಿದ ಮಹಾ ಸಾದ್ವಿ.

ಹೆಣ್ಣು ಅಬಲೆಯಲ್ಲ ಎಂಬಂತೆ
ಅನುಭವ ಮಂಟಪದಿ ತಾ
ವಚನ ಸಾಹಿತ್ಯದ ರುಚಿ ಉಣಿಸಿ
ಅನುಭಾವ ಹಂಚಿ ನಿಂದ ಮಾತೆ.

ಭೋಗ ಭಾಗ್ಯ ಜೀವನ ತೊರೆದು
ಭಕ್ತಿ ಮುಕ್ತಿಯ ಮಾರ್ಗ ತೋರಿ
ಮಮತಾ ಮೂರ್ತಿಯೇ ಆದಳು
ಜಗದ ಅಕ್ಕ ಮಹಾದೇವಿ ಅಕ್ಕ.


✍️ ಡಾ.ಮಹೇಂದ್ರ ಕುರ್ಡಿ, ಹಟ್ಟಿ, ರಾಯಚೂರು ಜಿಲ್ಲೆ