ಅನುದಿನ ಕವನ-೧೨೯೯, ಕವಯಿತ್ರಿ: ಲಾವಣ್ಯ ಪ್ರಭ, ಮೈಸೂರು

ಅವನೊಡಲ ತುಂಬಾ
ನೀಲಿಯಾಗಸ ತನ್ನೆಲ್ಲಾ ಬಣ್ಣ
ಸುರುವಿ ಸುಖಿಸಿದರೆ
ಸಾವಿರಾರು ನದಿಗಳು
ಅವನೊಳಗೇ ಕರಗಿ ಆಳದಲ್ಲೀಗ
ಮುತ್ತು ರತ್ನ ಪಚ್ಚೆ ಹವಳ ಹೊಳೆದು
ಅಲ್ಲೆಲ್ಲೋ ಶುದ್ಧ ಅನುರಾಗದ ರಾಗ…

ಮುಂಜಾನೆಯ ಮಂಜಿನಲಿ
ಸಣ್ಣಗೆ ಸೀಟಿ ಹೊಡೆದು
ಜಿಗಿದು ಹೊಸ ನೋಟ ನೇಯುತ್ತಾ
ಮಧ್ಯಾಹ್ನದ ಚುರುಕು ಬಿಸಿಲಿಗೆ
ಮದವೇರಿಸಿಕೊಂಡು ಮಿರುಗುವವ…
ಮುಸ್ಸಂಜೆಯಲಿ ಮದಿರೆಯ
ನಶೆಯೇರಿಸಿಕೊಂಡು ಸಖಿಯ ಸಂಗದಲಿ
ಸುರತ ರಮಿಸುವ ಉಮೇದಿನಲಿ
ಕೊಂಚ ಕೊಂಚವೇ ರೆಕ್ಕೆ ಬಿಚ್ಚಿ
ಉನ್ಮತ್ತಗೊಂಡ ಕಡಲಹಕ್ಕಿ ಆತ.

ಗಾಢರಾತ್ರಿಯ ನೀರವತೆಯಲಿ
ಅಲೆಯುಬ್ಬರ ಇಳಿತಗಳಿಗೆ
ಬೆವರಿ ಬಿಸಿಯಾಗಿ
ದಡದ ಮೇಲಿನ ರಾಸಲೀಲೆಗೆ
ಸಾವಿರ ಕಣ್ಣಿನ ನವಿಲಿನಂಥವನು
ಅಂಗಾತ ಮೈಚೆಲ್ಲಿ ತನ್ನುದ್ದಕ್ಕೂ
ತೋಳ ಚಾಚಿ
ನಕ್ಕು ಬಿಕ್ಕಿ ನಿಸೂರಾಗುತ್ತಾ
ಅರೆತೆರೆದ ಕಂಗಳಲಿ ಕನವರಿಸುವ
ಕಡು ವ್ಯಾಮೋಹಿ
ಲೆಕ್ಕವಿರದಷ್ಟು ನದಿಗಳನು ತಬ್ಬಿಯೂ
ಚಿರವಿರಹಿ.

ಕರೆವ ಕೊರಳು ಕೊಳಲಾಗುವ ಹೊತ್ತಲ್ಲಿ
ಹರಿಯತೊಡಗುತ್ತಾಳೆ ಈ ಇವಳು…
ಹಾದಿಬದಿಯ ಹೊಲಗದ್ದೆಗಳನ್ನೆಲ್ಲಾ
ಮಾಂತ್ರಿಕ ಬೆರಳಲ್ಲೇ ನೇವರಿಸಿ
ಹಸಿರಾಗಿಸುತ್ತಾ
ಬಯಲು ಮೈದಾನದಲ್ಲಿ…
ಬಲು ಗಾಂಭೀರ್ಯದೀ ಹೆಣ್ಣು
ಘಟ್ಟಸಂದುಗಳಲ್ಲಿ ಒಮ್ಮೆ ತೊರೆ
ಮತ್ತೊಮ್ಮೆ ಸಣ್ಣಝರಿ
ಕೋಡುಗಲ್ಲು ಮಲೆಘಟ್ಟಗಳ ಮೇಲೆ
ಭೋರ್ಗರೆವ ಜಲಪಾತದಂಥವಳು.

ಬತ್ತಿ ಹೋಗುವುದಿಲ್ಲ ಆಕೆ ಎಂದೂ…
ಒಳಗೊಳಗೇ ಹರಿದು
ತೃಷೆ ಇಂಗಿಸುವ ಅಂತರಗಂಗೆ

ಕೊಂಚವೂ ಗಡಿಬಿಡಿ ಧಾವಂತಗಳಿಲ್ಲದೇ
ಅವನೆಡೆಗೆ ಹರಿಯುವ ಧ್ಯಾನದಲ್ಲಿ
ಆಕೆಯಂತೂ
ಅಪ್ಪಟ ನದಿಯಂಥವಳು.


-ಲಾವಣ್ಯ ಪ್ರಭ, ಮೈಸೂರು
—–