ಎಲ್ಲರಂಥವನಲ್ಲ
ತಪ್ಪು ತಡಿ ಬರೀತಾನೆ
ಏನಿದು ಎಂದರೆ
ತಿದ್ದು ನೀ ಅಂತಾನೆ
ರಾಗವಿರದೆ ಹಾಡುತ್ತಾನೆ
ಅಯ್ಯೋ ಎಂದರೆ
ನೀ ಹಾಡು ಸ್ವರವೇ ಅಂತಾನೆ
ಕೂಗಾಡುತಿರುತಾನೆ
ಶಾಂತಿ ಮಾರಾಯ ಎಂದರೆ
ಯಾರೂ ಬೇಡ ಅಂತಾನೆ
ತಪ್ಪನೊಪ್ಪಿಕೋ ಎಂದರೆ
ಕಿವಿ ಕೇಳುವುದಿಲ್ಲ
ಅಪ್ಪಿಕೊಳ್ತಾನೆ ಹಾಗೇ
ಮಧುಮೇಹದ ಬಗ್ಗೆ
ಲೇಖನವಿದೆ ಎಂದರೆ
ಏನಿದೆ ಓದು ಅಂತಾನೆ
ಎಲ್ಲವೂ ಗೊತ್ತಿದ್ದೂ
ಮುಗ್ಧನಂತಿರುತ್ತಾನೆ
ಪೇಜಾಟ ನೋಡಿ ನಗುತ್ತಾನೆ.
ಎಲ್ಲರಂಥವನಲ್ಲ
ಗುಡುಗು ಸಿಡಿಲು
ಮಳೆಯೂ ತಾನೇ ನಕ್ಕು ಬಿಡಲು
ಸಾಗರದಾಳವು
ಭೂಮಿಯಗಲವೂ ಅವನೇ
ಪ್ರಕೃತಿಯೊಂದಿಗಿರುವ ಪುರುಷನೇ
ಸುಮ್ಮನೇ ಬೈತಾನೆ
ಕಾಣದಿರೆ ಕರಗುತ್ತಾನೆ
ಜನರೆದುರು ಮೆಚ್ಚಿಕೋತಾನೆ
ಎಷ್ಟೂಂತ ತಿದ್ದಲೆಂದು
ಕೈ ಬಿಟ್ಟು ಬಿಡಲೇ
ತಿದ್ದುತಲೇ ಇದ್ದು ಬಿಡಲೇ?
-ನಿಂಗಮ್ಮ ಭಾವಿಕಟ್ಟಿ, ಹುನಗುಂದ