ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಕಡುಬಡವರು, ಶೋಷಿತರು, ಆದಿವಾಸಿಗಳ ನಿರ್ಲಕ್ಷ್ಯ -ಆರ್ಥಿಕ ತಜ್ಞ ಡಾ.ಟಿ.ಆರ್.ಚಂದ್ರಶೇಖರ್

ಬಳ್ಳಾರಿ ಜು.30: ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರಕಾರ ಉಳ್ಳವರಿಗೆ ಹೆಚ್ಚು ಆದ್ಯತೆ ನೀಡುವ ಭರದಲ್ಲಿ‌ ಕಡುಬಡವರು, ಶತಶತಮಾನಗಳಿಂದ ಶೋಷಣೆಗೆ ಒಳಗಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಆದಿವಾಸಿಗಳನ್ನು ನಿರ್ಲಕ್ಷಿಸಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಆರ್ಥಿಕ ತಜ್ಞ  ಡಾ.ಟಿ.ಆರ್.ಚಂದ್ರಶೇಖರ್ ಅವರು ತಿಳಿಸಿದರು.

ಸ್ಥಳೀಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ `೨೦೨೪-೨೫ನೇ ಸಾಲಿನ ಬಜೆಟ್’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
೨೦೨೪-೨೫ನೇ ಸಾಲಿನ ಕೇಂದ್ರದ ಬಜೆಟ್ ನಗರ ಕೇಂದ್ರಿತವಾಗಿದೆ ಎಂದರು.
ಈ ಬಾರಿಯ ಬಜೆಟ್‌ನಲ್ಲಿ ಕುಶಲತೆಯ ಬಗ್ಗೆ ತುಂಬಾ ಕಾರ್ಯಕ್ರಮಗಳಿವೆ. ಆದರೆ ಕೌಶಲ್ಯ ತರಬೇತಿಯೇ ಹೊರತು ನಿರುದ್ಯೋಗ ನಿವಾರಿಸುವ ಕ್ರಮವಿಲ್ಲ ಎಂದು ಹೇಳಿದರು.
ಸಂವಿಧಾನದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಂಬ ಭೇದ ಭಾವವಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಕ್ಕೆ ಎಷ್ಟು ಅಧಿಕಾರ, ಹಕ್ಕುಗಳು ಇರುತ್ತವೆಯೋ ಅಷ್ಟೇ ಅಧಿಕಾರ ಮತ್ತು ಹಕ್ಕುಗಳು ರಾಜ್ಯ ಸರ್ಕಾರಗಳಿಗೂ ಇರುತ್ತವೆ. ಬಜೆಟ್ ಹಂಚಿಕೆ ಮಾಡುವ ಸಂದರ್ಭದಲ್ಲಿ ಎಲ್ಲ ವರ್ಗಗಳಿಗೆ ಆದ್ಯತೆ ನೀಡಬೇಕಾದುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂವಿಧಾನದ ಸಮವರ್ತಿತ ಪಟ್ಟಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸಮಾನವಾದ ಹಕ್ಕುಗಳನ್ನು ನೀಡಲಾಗಿದೆ. ಸರ್ಕಾರವು ಬಜೆಟ್ ಮಂಡನೆಯ ಸಂದರ್ಭದಲ್ಲಿ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ತೆರಿಗೆಗಳನ್ನು ನಿರೀಕ್ಷಿಸುತ್ತದೆ. ಕೆಲವೊಮ್ಮೆ ಸರ್ಕಾರಗಳಿಗೆ ಅನಿರೀಕ್ಷಿತವಾಗಿ ವೆಚ್ಚಗಳು ಎದುರಾಗುತ್ತವೆ. ಉದಾಹರಣೆಗೆ ಪ್ರಸ್ತುತ ಮಲೆನಾಡು, ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ, ಪ್ರವಾಹ. ಇಂತಹ ಸಮಸ್ಯೆಗಳನ್ನು ಎದುರಿಸಲು ಸರ್ಕಾರಗಳು ಸಾಲವನ್ನು ಮಾಡುತ್ತವೆ ಎಂದರು.


ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಉದ್ಯೋಗ ಸೃಷ್ಟಿಸಬೇಕು . ಐವತ್ತು ವರ್ಷಗಳಲ್ಲಿಯೇ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ ಎಂದು ದೂರಿದರು.
ಚುನಾವಣೆಯಲ್ಲಿ ಬಹುಮತ ದೊರೆಯದಿರುವದರಿಂದ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳ ಐದು ಕಾರ್ಯಕ್ರಮಗಳ ಗುಚ್ಛವನ್ನು ಬಜೆಟ್‌ನಲ್ಲಿ ನೀಡಲಾಗಿದೆ. ಇದು ಕನಿಷ್ಠ ಉದ್ಯೋಗಕ್ಕೆ ಆದ್ಯತೆ ನೀಡಿದಂತಾಗಿದೆ. ಇವು ಕೂಡ ಉದ್ಯೋಗ ನೀಡುವ ಕಾರ್ಯಕ್ರಮಗಳಲ್ಲ. ಉದ್ಯೋಗ ಸೃಷ್ಟಿಸಲು ಉತ್ತೇಜನ ನೀಡುವುದಾಗಿದೆ ಎಂದು ತಿಳಿಸಿದರು.
ಲರಾಜಕೀಯ ವ್ಯವಸ್ಥೆಯಲ್ಲಿ ಪ್ರಧಾನ ಮಂತ್ರಿಗಳು ಸಬ್‌ಕಾ ಸಾತ್ ಸಬ್‌ಕಾ ವಿಕಾಸ್ ಎಂದು ಹೇಳಿದ್ದಾರೆ. ಆದರೆ ಅಭಿವೃದ್ಧಿ ಎಂದರೆ ಕಟ್ಟಡ, ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವುದು ಮಾತ್ರ ಅಭಿವೃದ್ಧಿ ಅಲ್ಲ. ಆರ್ಥಿಕ ಸಮೃದ್ಧತೆ ಎಂದರೆ ಸಮಗ್ರ ಜನರ ಸಮೃದ್ಧಿಯಾಗಬೇಕು. ಆರೋಗ್ಯ, ಶಿಕ್ಷಣ, ಸಮಾಜಸೇವೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರದ ನ್ಯಾಷನಲ್ ಹೆಲ್ತ್ ಸರ್ವೇ ಸಂಸ್ಥೆಯು ಪ್ರತಿ ಐದು ವರ್ಷಕ್ಕೊಮ್ಮೆ ಆರೋಗ್ಯ ಸ್ಥಿತಿಯ ಬಗ್ಗೆ ಸಮೀಕ್ಷೆಯನ್ನು ಮಾಡುತ್ತಿದೆ. ದೇಶದ ೫ನೇ ಸಮೀಕ್ಷೆ ೨೦೧೯-೨೦ರಲ್ಲಿ ನಡೆದಿದೆ. ಈ ಸಮೀಕ್ಷೆಯಲ್ಲಿ ಬಳ್ಳಾರಿ, ರಾಯಚೂರು ಭಾಗದ ಮಹಿಳೆ ಮತ್ತು ಮಕ್ಕಳಲ್ಲಿ ಅನಿಮೀಯತೆ ಹೆಚ್ಚಿದೆ. ಇದರಿಂದ ಬೌದ್ಧಿಕತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿಯು ತಿಳಿಸಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕರ್ನಾಟಕದ ಭಾಗದ ಮಕ್ಕಳಿಗಿಂತ ಈ ಭಾಗದ ಮಕ್ಕಳು ಬೌದ್ಧಿಕತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿಂದುಳಿಯಲು ಕಾರಣವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಕೆ.ಮಂಜುನಾಥರೆಡ್ಡಿ ಅವರು ಮಾತನಾಡಿದರು.
ವೇದಿಕೆಯಲ್ಲಿ  ಪರೀಕ್ಷಾ ನಿಯಂತ್ರಕರಾದ ಡಾ.ಶೋಭಾರಾಣಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಾಲಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹುಚ್ಚೂಸಾಬ್ ಪಿ, ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೃಷ್ಣ ಜೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತ ಪದವಿ ವಿದ್ಯಾರ್ಥಿಗಳು ಮತ್ತು ಸ್ನಾತಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿನಿ ಪಲ್ಲವಿ ಪ್ರಾರ್ಥಿಸಿದರು. ಸಹ ಪ್ರಾಧ್ಯಾಪಕ ಡಾ.ಶ್ರೀನಿವಾಸರೆಡ್ಡಿ ಬಿ ಅವರು ಸ್ವಾಗತಿಸಿದರು. ಡಾ.ಹೊನ್ನೂರಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಹುಚ್ಚೂಸಾಬ್ ಅವರು  ಡಾ.ಟಿ.ಆರ್.ಚಂದ್ರಶೇಖರ್ ಅವರನ್ನು  ಪರಿಚಯಿಸಿದರು. ವೀರೇಶಯ್ಯಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶ್ರೀನಿವಾಸ್ ಅವರು ವಂದಿಸಿದರು.
—–