ಕನ್ನಡ ಸಾಂಸ್ಕೃತಿಕ‌ ಲೋಕಕ್ಕೆ ಕನ್ನಡ ವಿವಿ‌ ವಿದ್ವಾಂಸರ ಕೊಡುಗೆ ಅಪಾರ -ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ

ಹಂಪಿ, ಆ.1:   ನಾಡಿನ ಬಹುತ್ವದ ನೆಲೆಯಲ್ಲಿ ರೂಪುಗೊಂಡಿರುವ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಾಹಿತ್ಯ ಭಂಡಾರ, ವಚನ ಸಾಹಿತ್ಯ, ಕನ್ನಡ ಭಾಷಾ ಅಭಿವೃದ್ಧಿ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ಪರಿಚಯಿಸುವಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕರ ಕೊಡುಗೆ ಶ್ಲಾಘನೀಯವಾದ್ದು ಎಂದು ಕನ್ನಡ ವಿಶ್ವವಿದ್ಯಾಲಯದ    ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಭುವನವಿಜಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಾಧ್ಯಾಪಕರಾದ ಡಾ. ಕೆ.ಎಂ. ಮೇತ್ರಿ, ಡಾ. ಡಿ. ಪಾಂಡುರಂಗಬಾಬು ಹಾಗೂ ಡಾ. ಕೆ. ರವೀಂದ್ರನಾಥ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.                  ಈ ಮೂವರು ವೃತ್ತಿ ಮತ್ತು ಪ್ರವೃತ್ತಿ ಎರಡನ್ನು ಸಂಶೋಧನೆಯನ್ನಾಗಿಸಿಕೊಂಡು, ನಾಡಿಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಇನ್ನು ಕನ್ನಡ ವಿಶ್ವವಿದ್ಯಾಲಯವು ಸರ್ವರಿಗೂ ಮುಕ್ತವಾಗಿದ್ದು, ನಿವೃತ್ತ ಪ್ರಾಧ್ಯಾಪಕರು ಹಾಗೂ ನೌಕರರ ಸೇವೆಗಾಗಿ ಕನ್ನಡ ವಿಶ್ವವಿದ್ಯಾಲಯವು ಸದಾ ತೆರೆದಿರುತ್ತದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ಭಾಷಾ ನಿಕಾಯದ ಡೀನರಾದ ಡಾ. ಎಫ್.ಟಿ. ಹಳ್ಳಿಕೇರಿ, ಸಮಾಜ ವಿಜ್ಞಾನಗಳ ನಿಕಾಯದ ಡೀನರಾದ ಡಾ.ಚಲುವರಾಜು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪಕುಲಸಚಿವ ಡಾ. ಎ. ವೆಂಕಟೇಶ ಗಣ್ಯರನ್ನು ಸ್ವಾಗತಿಸಿದರು, ಸಹಾಯಕ ಕುಲಸಚಿವರಾದ ಗುರುಬಸಪ್ಪ ವಂದಿಸಿದರು, ಅಧ್ಯಾಪಕರಾದ ಜ್ಯೋತಿ ಅವರು ನಿರೂಪಿಸಿದರು.