ಅನುದಿನ ಕವನ-೧೩೦೯, ಕವಿ: ಸುಮಿತ್ ಮೇತ್ರಿ, ವಿಜಯಪುರ, ಕವನದ ಶೀರ್ಷಿಕೆ:ಮೃದ್ಗಂಧ

ಮೃದ್ಗಂಧ

ಹುಚ್ಚು ಕವಿಯೊಬ್ಬ
ಮಳೆಗಾಲದ ಕೊನೆಯ ಮಳೆಯಲ್ಲಿ
ಮಣ್ಣಾಗುವ ಹೊತ್ತು:

ಸಖಿ,
ಕೊನೆಯ ಬಾರಿ
ನೋಡಲು ಬಂದಾಗ
ಕೈಕೈ ಹಿಚುಕಿಕೊಂಡು
ದೂರ ನಿಲ್ಲಬೇಡ
ಮತ್ತು ಹಾಗೆ ಹೋಗಬೇಡ

ಕೊನೆಯದಾಗಿ
ನನ್ನ
ನಿನ್ನ
ಮಡಿಲಲ್ಲಿ ಇರಿಸಿಕೊಂಡು
ಹಣೆಗೆ ಒಂದು ಮುತ್ತಿಡು

ನೀನು ಮುತ್ತಿಟ್ಟ ಘಳಿಗೆ
ಬೀಸುವ ಗಾಳಿ ಸ್ತಬ್ಧ
ಹಾಡುವ ಕೋಗಿಲೆ ಮೂಕ

ಸುಮ್ಮನೆ
ತುಂತುರು ಮಳೆ ಹನಿಗಳು
ನಿನ್ನ ಕೆನ್ನೆ ಮೇಲೆ ಬಿದ್ದಾಗ
ನನ್ನ ವಿನಾಕಾರಣ ನೆನೆಯ ಬೇಡ

ರಸ್ತೆ ಬದಿಯಲ್ಲಿ ನಿಂತು
ಒಂದು ಬಿಸಿ ಬಿಸಿ ಕಾಫಿ ಕುಡಿ

ಆ ಅಂಗಡಿ ದೀಪಕ್ಕೆ
ಇನ್ನೊಂದಿಷ್ಟು ಎಣ್ಣೆ ಸುರಿದು
ಕುಡಿ ತುದಿಯನ್ನು
ಬೆರಳುಗಳಿಂದ ನಯವಾಗಿ ತೀಡು

ಆಗಂತುಕವಾಗಿ
ಆಕಾಶದ ತಾರೆಗಳು ಕಣ್ಣು ಪಿಳುಕಿಸಲು
ಅದು,
ಮೂಲೆಯಲ್ಲಿದ್ದ ಒಂಟಿ ತಾರೆ ಹೊಳೆದರೆ
ಒಂದು ಬಾರಿ
ತುಟಿಯ ಮೇಲೆ ನಗು ತಂದು
ಫೋಟೋಗೆ ಫೋಸ್ ಕೊಟ್ಟ ಹಾಗೆ ಕಣ್ಣರಳಿಸಿ
ನಿನ್ನ ಮುಂಗುರುಳು ಸರಿಮಾಡಿಕೊಂಡು ನೋಡು
ನೋಡಿದ ತತ್ಕ್ಷಣವೇ
ಮರಳಿ ನೋಡದೆ ಹೊರಟು ಬಿಡು

ನಿನ್ನ ಬರಿಗಾಲಿಗೆ ಮೆತ್ತಿದ ಮಣ್ಣನ್ನು
ಒರೆಸಿ ಕಾರು ಹತ್ತಬೇಡ
ಕೈ ಕಾಲು ಮುಖ ತೊಳೆದುಕೊಳ್ಳದೇ
ಮನೆಯೊಳಗೆ ಕಾಲಿಟ್ಟಾಗ ‘ಸೂತ್ರ’ ಬಂದು
“ಅಮ್ಮ” ಎಂದು ತಬ್ಬಿಕೊಂಡರೆ
ಸುಮ್ಮನೆ ನಿರ್ಭಾವುಕವಾಗಿ ಎದೆಗೆ ಒತ್ತಿಕೊ…

ಇಷ್ಟೇ,
ಈ ಲೋಕದಲ್ಲಿದ್ದ ಕವಿಯೊಬ್ಬ
ಮಣ್ಣಾಗಿ ಹೋದ ಎಂದು
ಸುದ್ದಿ ಪತ್ರಿಕೆಗಳು ಸಂಭ್ರಮಿಸಲಿ!


-ಸುಮಿತ್ ಮೇತ್ರಿ, ವಿಜಯಪುರ
—–