ಅನುದಿನ ಕವನ-೧೩೧೨, ಕವಿ: ಸಿದ್ದರಾಮ ತಳವಾರ, ದಾಸ್ತಿಕೊಪ್ಪ, ಬೆಳಗಾವಿ ಜಿ., ಕವನದ ಶೀರ್ಷಿಕೆ: ನನ್ನೆದೆಯ ಸ್ವಗತ

ನನ್ನೆದೆಯ ಸ್ವಗತ

ಎದೆಯೊಳಗೆ ಕೆಂಡದಂತ ನೋವಿದ್ದರೂ ಅದುಮಿಟ್ಟುಕೊಂಡೇ ನಗುತ್ತೇನೆ,
ಮನದ ಕಾವಲಿಯಲ್ಲಿ
ಮಣಗಟ್ಟಲೇ ದುಃಖವಿದ್ದರೂ
ಪ್ರೀತಿ ಪ್ರವಾಹವನೇ ಹರಿಸುತ್ತೇನೆ,

ಮಧ್ಯರಾತ್ರಿ ;
ಎದ್ದು ಹೊರಡಬೇಕೆನ್ನುವಾಗಲೆಲ್ಲ
ಬುದ್ದ ನೆನಪಾಗುತ್ತಾನೆ
ಯಾರೋ ಕಿಸಕ್ಕನೇ ನಕ್ಕಂತಾಗುತ್ತದೆ,

ಗಿಜಿಗಿಡುವ ಸಂತೆಯಲಿ ನಿಂತು
ಯಾರೂ ಇಲ್ಲವೆಂಬಂತೆ ಹಂಬಲಿಸುತ್ತೇನೆ,

ಎದೆ ಭಾರ;
ಅತ್ತು ಹಗುರಾಗಲೊಂದು
ಸಾಂತ್ವನದ ಹೆಗಲು ಹುಡುಕಿ ಹೈರಾಣಾಗುತ್ತೇನೆ,

ಇದ್ದೇ ಸಾಯುವುದಕ್ಕಿಂತ
ಸತ್ತೇ ಇರಬೇಕೆನ್ನುತ್ತೇನೆ,
ಇದು ಕವಿತೆಯಲ್ಲ ನನ್ನೆದೆಯ ಸ್ವಗತ…

-ಸಿದ್ದರಾಮ ತಳವಾರ, ದಾಸ್ತಿಕೊಪ್ಪ, ಚನ್ನಮ್ಮನ ಕಿತ್ತೂರು, ಬೆಳಗಾವಿ ಜಿಲ್ಲೆ.
—–