ಅನುದಿನ ಕವನ-೧೩೧೪, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳಗಾವಿ ಜಿ., ಕವನದ ಶೀರ್ಷಿಕೆ: ಗೊತ್ತಿಲ್ಲ…!

ಗೊತ್ತಿಲ್ಲ…!

ಇರುವ ಪ್ರೀತಿ ಹಂಚಿಬಿಡು ಯಾವಾಗ ಹೊರಟು ಹೋಗುವುದೊ ಗೊತ್ತಿಲ್ಲ||
ಹೃದಯ ಒಲವ ಹರಿವಿಬಿಡು ಯಾವಾಗ ದಡ ಸೇರುವುದೊ ಗೊತ್ತಿಲ್ಲ||

ಬಡವ ಬಲ್ಲಿದರೆನ್ನದೆ ಬೆಟ್ಟ ಗುಡ್ಡ ಜಾರಿ ಕಣಿವೆ ಸೇರುವ ಕಾಲ ಬಂದಿದೆ|
ನಾಡು ನುಡಿ ಸವಿದುಬಿಡು ಯಾವಾಗ ಕಣ್ಣು ಕತ್ತಲಾಗುವುದೊ ಗೊತ್ತಿಲ್ಲ||

ಗೋರಿ ಮೇಲಿಟ್ಟ ಹೂವ ಕಂಪು ಮಣ್ಣ ಸೇರಿದರೇನು ಗೊತ್ತಾಗುವುದು|
ಮಲ್ಲಿಗೆ ಸಂಪಿಗೆ ಮುಡಿದುಬಿಡು ಯಾವಾಗ ಬಾಡುವುದೊ ಗೊತ್ತಿಲ್ಲ||

ಕರುಣೆಯ ಕಣ್ಣೊಳಗೆ ದ್ವೇಷವೇ ತುಂಬಿದರೇನು ಮಾಡುವುದು|
ನಕ್ಕು ನಗೆಯಲ್ಲಿ ತೇಲಿಬಿಡು ಯಾವಾಗ ಮೌನ ಆವರಿಸುವುದೊ ಗೊತ್ತಿಲ್ಲ||

‘ಗಟ್ಟಿಸುತ’ ಬಿಟ್ಟ ಬಿರುಕುಗಳೆಲ್ಲ ಗಟ್ಟಿಗೊಳ್ಳಲಿ ಸಂಬಂಧದ ಬಂಧದಲ್ಲಿ|
ಹೇಳದೆ ಇಳಿದು ಹೋಗುವ ಪಾಜಿ ಯಾವಾಗ ಬರವುದೊ ಗೊತ್ತಿಲ್ಲ||

-ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳಗಾವಿ ಜಿ.