ತುಂಗಭದ್ರಾ  ಆಣೆಕಟ್ಟು ಗೇಟಿನ ದುರಸ್ತಿಗೆ ಉನ್ನತ ಮಟ್ಟದ ತಂತ್ರಜ್ಞರ ತಂಡ: ಡಿಸಿಎಂ ಡಿ.ಕೆ. ಶಿವಕುಮಾರ್

ತುಂಗಭದ್ರಾ ಜಲಾಶಯ(ವಿಜಯನಗರ ಜಿಲ್ಲೆ) ಆ. 11: ತುಂಗಭದ್ರಾ ಅಣೆಕಟ್ಟಿನ ಹಾನಿಗೊಳಗಾದ 19 ನೇ ಗೇಟನ್ನು ದುರಸ್ತಿ ಮಾಡಲು ಉನ್ನತ ಅನುಭವವುಳ್ಳವರನ್ನು ಕರೆಸುತ್ತಿದ್ದೇವೆ. ಈ ಘಟನೆ ಅತ್ಯಂತ ದುಃಖಕರ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಭಾನುವಾರ ಮಧ್ಯಾಹ್ನ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ತುಂಗಭದ್ರಾ ನೀರಾವರಿ ನಿಗಮದಲ್ಲಿಯೂ ಉತ್ತಮ ತಂತ್ರಜ್ಞರಿದ್ದಾರೆ. ಅಲ್ಲದೇ ಗುತ್ತಿಗೆದಾರ ಸಂಸ್ಥೆಗಳಾದ ಕೃಷ್ಣಯ್ಯ, ನಾರಾಯಣ ಹಾಗೂ ಹಿಂದುಸ್ಥಾನ್ ಸಂಸ್ಥೆಯ ತಂಡಗಳು ಈಗಾಗಲೇ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ತಂತ್ರಜ್ಞರಿಗೆ ಈಗಾಗಲೇ ಅಣೆಕಟ್ಟಿನ ವಿನ್ಯಾಸ ನಕ್ಷೆ ನೀಡಲಾಗಿದೆ ಎಂದು ಹೇಳಿದರು.                                                     ಶನಿವಾರ ರಾತ್ರಿ ಜಲಾಶಯದ 10 ಗೇಟ್ ಗಳನ್ನು ತೆರೆಲಾಗಿತ್ತು. ಏಕಾಏಕಿ ಜಲಾಶಯದ 19 ನೇ ಗೇಟಿನ ಚೈನ್ ಲಿಂಕ್ ತುಂಡಾದ ಹಿನ್ನೆಲೆ ಎಲ್ಲಾ ಗೇಟ್ ತೆರೆದು ಅಣೆಕಟ್ಟಿನ ಮೇಲಿನ ಒತ್ತಡ ಕಡಿಮೆ ಮಾಡಲಾಗಿದೆ ಎಂದರು.                                                          ಸದ್ಯ ಜಲಾಶಯದಿಂದ 98 ಸಾವಿರ ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ. 19 ನೇ ಗೇಟ್ ಒಂದರಲ್ಲಿಯೇ 35 ಸಾವಿರ ಕ್ಯೂಸೆಕ್ ನೀರು ಹೊರಹೋಗುತ್ತಿದೆ. ಅಚ್ಚುಕಟ್ಟು ಪ್ರದೇಶದ ರೈತರು ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.                                      ರೈತರ ಒಂದು ಬೆಳೆಗಾದರೂ ನೀರನ್ನು ಉಳಿಸುತ್ತೇವೆ:  ಜಲಾಶಯದಿಂದ 60 ಟಿಎಂಸಿ ನೀರು ಖಾಲಿ ಮಾಡಬೇಕಿದೆ. ಗೇಟನ್ನು ಮತ್ತೆ ಹಾಕಬೇಕೆಂದರೆ ಒತ್ತಡ ಕಡಿಮೆ ಮಾಡಬೇಕಿದೆ. ಜಲಾಶಯದಲ್ಲಿ 150 ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದು. ಜಲಾಶಯಕ್ಕೆ ಒಳಹರಿವು 28,000 ಕ್ಯೂಸೆಕ್ಸ್ ಇದೇ. ಕನಿಷ್ಠ ನಮ್ಮ ರೈತರಿಗೆ ಒಂದು ಬೆಳಗಾದರೂ ಒದಗಿಸುವಷ್ಟು ನೀರನ್ನು ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.            ಆಣೆಕಟ್ಟಿನ ಪ್ರಮುಖ ಮೂರು ಕಾಲುವೆಗಳಿಗೆ ನೀರನ್ನು ಹರಿಸಲು 115 ಟಿ ಎಂ ಸಿ ನೀರಿನ ಅವಶ್ಯಕತೆ ಇದೆ. ಇದೆಲ್ಲವನ್ನು ಲೆಕ್ಕಾಚಾರ ಹಾಕಿ ರೈತರನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಪಕ್ಕದ ರಾಜ್ಯಗಳಿಗೆ ಈಗಾಗಲೇ 25 ಟಿಎಂಸಿ ನೀರನ್ನು ಕೊಡಲಾಗಿದೆ. ಇನ್ನೂ 90 ಟಿಎಂಸಿ ನೀರನ್ನು ಕೊಡಬೇಕಾಗಿದೆ. ಮೂರು ರಾಜ್ಯಗಳು ಒಟ್ಟಿಗೆ ಸೇರಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ರೈತರು ಆತಂಕಕ್ಕೆ ಒಳಗಾಗಬೇಡಿ” ಎಂದರು.                                             ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಈ ಮೂರು ರಾಜ್ಯಗಳ ರೈತರಿಗೆ ಬಹುಮುಖ್ಯವಾದ ಜಲಾಶಯ ಇದಾಗಿದೆ. ನಮ್ಮ ಕರ್ನಾಟಕದ 12 ಲಕ್ಷ ಹೆಕ್ಟರ್ ಅಚ್ಚುಕಟ್ಟು ಪ್ರದೇಶವನ್ನು ಇದು ಹೊಂದಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ಅನೇಕ ಜಿಲ್ಲೆಗಳು ಇದರಿಂದ ಲಾಭ ಪಡೆಯುತ್ತಿವೆ. ನಮ್ಮ ರೈತರು ಆತಂಕ ಪಡಬೇಕಾಗಿಲ್ಲ ಸರ್ಕಾರ ನಿಮ್ಮ ಜೊತೆಗಿದೆ ಎಂದು ತಿಳಿಸಿದರು.           ಜಲಾಶಯ 60 ರಿಂದ 70 ವರ್ಷ ಹಳೆಯ ಜಲಾಶಯವಾಗಿದ್ದು. ಘಟನೆಗೆ ಸಂಬಂಧಿಸಿದಂತೆ ನಾನು ಯಾವ ಅಧಿಕಾರಿಗಳನ್ನೂ ದೂರುವುದಿಲ್ಲ. ದೇಶದ ಸಂಪತ್ತನ್ನು ಕಾಪಾಡಬೇಕಿದೆ. ಆಣೆಕಟ್ಟಿನ ಎರಡು ಕಿಲೋಮೀಟರ್ ಸುತ್ತಳತೆಯಲ್ಲಿ ತಂತ್ರಜ್ಞರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಹೊರತುಪಡಿಸಿ ಜನಪ್ರತಿನಿಧಿಗಳಿಗೂ ಸಹ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದರು.

ಬಾಗಿನ ಅರ್ಪಣೆ ಮುಂದೂಡಿಕೆ: ಆ.13 ರಂದು ಆಣೆಕಟ್ಟು ತುಂಬಿದ ಹಿನ್ನೆಲೆಯಲ್ಲಿ ನಾನು, ಸಿಎಂ ಬಾಗಿನ ಅರ್ಪಿಸುವ ಕಾರ್ಯಕ್ರಮವಿತ್ತು. ಈಗ ಅದನ್ನು ಮುಂದೂಡಲಾಗಿದೆ. ಮೊದಲು ಅಣೆಕಟ್ಟಿನ ಸುರಕ್ಷತೆ ನಮಗೆ ಮುಖ್ಯವಾಗಿದೆ ” ಎಂದರು.                                                        ದುರಸ್ತಿಗೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ ನಮ್ಮ ಅಧಿಕಾರಿಗಳು ಪ್ರತಿಕ್ಷಣವೂ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಈ ಘಟನೆ ಆದ ಕ್ಷಣದಿಂದ ತ್ವರಿತವಾಗಿ ಕೆಲಸ ಮಾಡುತ್ತಿದ್ದಾರೆ. ಯಾರ ನಿರ್ಲಕ್ಷತೆಯಿಂದಲೂ ಈ ಅವಘಡ ನಡೆದಿಲ್ಲ. ಆಕಸ್ಮಿಕವಾಗಿ ಈ ಘಟನೆ ನಡೆದಿದೆ ಎಂದು ಹೇಳಿದರು.  ಇತರೆ ಜಲಾಶಯಗಳನ್ನು ಪರಿಶೀಲಿಸಲಾಗುತ್ತದೆಯೇ ಎಂದು ಕೇಳಿದಾಗ ಬೇರೆ ಜಲಾಶಯಗಳಲ್ಲಿ ರೋಪ್ ಹಾಗೂ ಚೈನ್ ಎರಡು ವ್ಯವಸ್ಥೆ ಮಾಡಲಾಗಿರುತ್ತದೆ. ಈ ಜಲಾಶಯವನ್ನು ವಿನ್ಯಾಸ ಮಾಡುವಾಗ ಚೈನ್ ವ್ಯವಸ್ಥೆ ಮಾಡಿದ್ದಾರೆ. ಮೊದಲು ಇಲ್ಲಿನ ಸಮಸ್ಯೆ ಪರಿಹರಿಸಿ ಆನಂತರ ಇತರೆಡೆ ಪರಿಶೀಲನೆ ಮಾಡಲಾಗುವುದು  ಎಂದು ಡಿಸಿಎಂ ತಿಳಿಸಿದರು.