ಮೌನವಾಗಿ ಮಾತನಾಡಬೇಕಿತ್ತು ಗಾಢ ಚುಂಬಿಸಿದೆ
ಹಚ್ಚಿಕೊಳ್ಳಬೇಕಿತ್ತು ಗಟ್ಟಿ ಬಿಗಿದಪ್ಪಿದೆ
ಅಕ್ಕ ನನ್ನ ಪ್ರೇಮ ವ್ಯಕ್ತವಾಗಿದ್ದು ಹೀಗೆ
ಹಾದಿ ತಪ್ಪೋಣ ಬಾ ಎಂದೆ
ದಡ್ಡ ಪದಶಃ ಅರ್ಥೈಸಿ ಹೆದರಿದ
ಕವಿಯಾಗಬೇಕಿತ್ತು ಆ ಸಾಲಿಗಿರುವ
ಎಲ್ಲ ಸಾಧ್ಯತೆಗಳನ್ನು ಜಾರಿಗೊಳಿಸುತ್ತಿದ್ದ
ಅಯೋಗ್ಯತನಕ್ಕೆ ವ್ಯಾಖ್ಯೆ ನೀನೇ ಗೀಚಿದ ಹತ್ತಾರು
ನಾಲಾಯಕ್ ಪುಸ್ತಕಗಳಲ್ಲಿರಬೇಕು ದೇಖೋ
ಕಡೆಗೂ ಪ್ರೇಮಕ್ಕೊಂದು ವ್ಯಾಖ್ಯಾನವನ್ನೂ
ರಚಿಸಲಾಗಲಿಲ್ಲ ನಿನಗೆ
ಚಾಣಾಕ್ಷ ನೀನು ಮತ್ತಷ್ಟು ಹೈರಾಣಾಗಿಸಬೇಕೆಂದುಕೊಂಡೆ
ಪ್ರೀತಿಯ ನೆಪವೇ ಆಗಬೇಕಿರಲಿಲ್ಲ ದೊರೆಯೇ
ಛಲವೇ ನನ್ನ ಶಕ್ತಿ, ದೌರ್ಬಲ್ಯವನ್ನು ದುರುಪಯೋಗವಾಗಿಸಿಕೊಂಡೆ
ನನ್ನ ಶಬ್ದಗಳು ನಿನ್ನ ತಿವಿದವಷ್ಟೆ
ನಿನ್ನ ಮೌನ ಹತ್ಯೆ ಮಾಡಿತು
ನಿನ್ನ ಎದೆಯೆಂಬ ಕೆಂಪು ಹಾಸಿನ ಬದುಕು
ನಿರೀಕ್ಷೆಯಾಗಿಯೇ ಉಳಿಯಿತು
ಪ್ರೀತಿಯ ಅಪೂರ್ಣತೆಯಿಂದಾಗಿ
ಅಂದೆಂದೋ ನಿನ್ನ ನೆನಪಲ್ಲಿ ಅರೆಬರೆ ಚಿತ್ರಿಸಿದ್ದ
ಕಣ್ಣ ಪ್ರೇಮದ ಚಿತ್ರವೀಗ ದ್ರವಿಸುತ್ತಿದೆ
ಒರೆಸಲು ನಿನ್ನದೇ ಕರವಸ್ತ್ರ ಬೇಕಿದೆ
ನಾನು ಎದೆಯಲ್ಲಿ ಜೋಪಾನ ಮಾಡಿದ್ದು
ನಿನ್ನ ಪ್ರತಿರೂಪ ಮಾತ್ರ
ಪ್ರತಿಕಾರಕ್ಕೆ ತಿರುಗಿದ್ದು ಹೇಗೆಂದು
ನೀನು ಹೇಳಬೇಕು
ಸಂಗೀತದ ಪಲುಕನ್ನು ಕಲಿ,
ಎದೆ ತಂಪಾಗುವವರೆಗೂ ಹಾಡು ಎಂದೆ
ಅಸೂಕ್ಷ್ಮ ನೋಡು ರಾಗದ ಯಾವ ಮಾಧುರ್ಯವೂ
ತಾಕಲೇ ಇಲ್ಲ ನಿನಗೆ
-ಮಮತಾ ಅರಸೀಕೆರೆ
—–