ಅನುದಿನ ಕವನ-೧೩೨೮, ಕವಿ: ಸೋಮೇಶ ಉಪ್ಪಾರ, ಮರಿಯಮ್ಮನಹಳ್ಳಿ, ಕವನದ ಶೀರ್ಷಿಕೆ:ಕೂಡಬೇಕೆಂದರೆ ಕಾರಣವೇ ಬೇಕಿಲ್ಲ….

 

ಕೂಡಬೇಕೆಂದರೆ ಕಾರಣವೇ ಬೇಕಿಲ್ಲ
ಕಟ್ಟೆಯೊಂದಿದ್ದರೆ ಸಾಕು,
ಹೃದಯದ ಭಾವನೆಗಳು, ಮನದ  ಕಟ್ಟೆಯೊಡೆದು ಹೊರನುಸುಳುತ್ತಲೇ ಇರುತ್ತವೆ.

ಚರಿತ್ರೆ,  ವರ್ತಮಾನ,  ತಲೆ ತಲಾಂತರಗಳ ಭಾವ ಬೆಸುಗೆಗಳ ಕತೆಗಳು, ಬಾಯಿಯ ತುದಿಯಲ್ಲಿಯೇ ಕುಣಿದಾಡುತ್ತಿರುತ್ತವೆ. ಕೂಡಬೇಕೆಂದರೆ ಕಾರಣವೇ ಬೇಕಿಲ್ಲ. ಕಟ್ಟೆಯೊಂದಿದ್ದರೆ ಸಾಕು.

ಗಂಡಸರಾದರೆ ಯಜಮಾನಿಕೆಯ ಗತ್ತು ತಮ್ಮತ್ತು ತಾನಾಗಿಯೇ ಬಂದು ಬಿಡುತ್ತದೆ, ಕಾಲಮೇಲೆ ಕಾಲು ತಾನಾಗಿಯೇ ಏರಿ ರಾಜಗಾಂಭೀರ್ಯದಿಂದ ಅಲುಗಾಡಲು ಆರಂಭಿಸುತ್ತದೆ.. ಕೂಡಬೇಕೆಂದರೆ
ಕಾರಣವೇ ಬೇಕಿಲ್ಲ.

ಹೆಂಗಸರಾದರೆ  ಓಣಿಯ ಎಲ್ಲರ ಕತೆಗಳೂ ಲೋಕ ವಾರ್ತೆಗಳಾಗಿ ಎರಡೆರಡು ಕಿವಿಗಳು ನೂರಾರು ಕಿವಿಗಳಾಗಿ, ಉದುಗಿಹೋದ ಒಳಕಿವಿಗಳೂ ಚುರಕಾಗಿ‌ ನೂರಾರು ಪಿಸುಮಾತಗಳಿಗೂ ಸಾಗರದಷ್ಟು ಜಾಗಮಾಡಿಕೊಳ್ಳುತ್ತವೆ.  ಕೂಡಬೇಕೆಂದರೆ ಕಾರಣವೇ ಬೇಕಿಲ್ಲ ಕಟ್ಟೆಯೊಂದಿದ್ದರೆ ಸಾಕು.

ಒಮ್ಮೊಮ್ಮೆ ಲೋಕಾರೂಡಿ ಮಾತುಗಳು ಧಾಂಗುಡಿಯಿಟ್ಟರೆ ಮತ್ತೊಮ್ಮೆ ಮತ್ತೆಲ್ಲಿಯದೋ ಆರದೋ ಕರುಣೆಯ ಕತೆಗಳು
ತೇಲಿ ಬಂದು ಎಲ್ಲರ ಹೃದಯಗಳ ತೇವಗೊಳಿಸಿ ಕಣ್ಣಂಚಲಿ ಹನಿಗಳು ಸಾಲುಗಟ್ಟುತ್ತವೆ.

ಕೂಡಬೇಕೆಂದರೆ ಕಾರಣವೇ ಬೇಕಿಲ್ಲ, ಕಟ್ಟೆಯೊಂದಿದ್ದರೆ ಸಾಕು..    ಮನೆಯ ಕಟ್ಟೆಯೊಂದು ಸಾಕು‌.
ಒಳ ಮಾತುಗಳೆಲ್ಲವೂ ಮನದ ಕಟ್ಟೆಯೊಡೆದು ಬರಲಾರಂಭಿಸುತ್ತವೆ. ಮನದ ಕತ್ತಲೆಯ ಕೋಣೆಗೆ ಬೆಳಕಾಗಲು ತವಕಿಸುತ್ತವೆ.

-ಸೋಮೇಶ ಉಪ್ಪಾರ, ಮರಿಯಮ್ಮನಹಳ್ಳಿ
—–