ಅನುದಿನ ಕವನ-೧೩೩೦, ಹಿರಿಯ ಕವಿ: ಅಶೋಕ ಶೆಟ್ಟರ್, ಧಾರವಾಡ, ಕವನದ ಶೀರ್ಷಿಕೆ: ಗೊಂದಲ

ಗೊಂದಲ

ಕುರುಡು ಎಂದವನ ಕೈ ಹಿಡಿದು ಅರ್ಧ ದಾರಿ ಸವೆಸಿದೆ
ಮೆಲ್ಲಗೆ, ಹರಳೊಂದೂ ಪಾದಕ್ಕೆ ಒತ್ತದಂತೆ
ಸರಬರ ಸಾಗುವ ವಾಹನ
ಯಾವ ಮೊನಚೂ ಮೈ ತಾಗದಂತೆ

ಕಣ್ಣಿಗೆ ದೃಶ್ಯ ತಾಕದಿದ್ದರೆ
ಪಾದಕ್ಕೆ ನೋವು ತಾಕದೆ?

ಆ ಇಂದ್ರಿಯದ ಊನ ಅದರದು
ಈ ಇಂದ್ರಿಯದ ನೋವು ಇದರದು.

ಹಾಗಂದುಕೊಂಡೇ ಸಾಗಿದ್ದೆ

ಹೆಣ್ಣಿನ ವಾಸನೆಯ ಮೂಗೂ ಆಘ್ರಾಣಿಸಿತು
ಕಣ್ಣೂ ನೋಡಿತು
ನಾಣ್ಯದ ಸದ್ದು ಕಿವಿಯೂ ಕೇಳಿತು
ಅದರ ಹೊಳಪ ಕಣ್ಣೂ ಕಂಡಿತು

ಮೋಸ ಹೋಗಿದ್ದೆ
ಮೋಸ ಹೋಗಿದ್ದೆನೆ?
ಇಂದ್ರಿಯಾಸಕ್ತಿ ಉದ್ದೀಪಿಸುವ ಅಪರ ಶಕ್ತಿಗೆ ಕುರುಡಾಗಿದ್ದೆನೆ?…

-ಅಶೋಕ ಶೆಟ್ಟರ್, ಧಾರವಾಡ
—–