ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ನಾಡು ಕಂಡ ಅಪ್ರತಿಮ ಪ್ರತಿಭಾನ್ವಿತ ಜಾನಪದ ಕಲಾವಿದೆ -ಕೊಪ್ಪಳ ವಿವಿ ಕುಲಪತಿ ಪ್ರೊ.‌ಬಿ.ಕೆ ರವಿ‌ ಬಣ್ಣನೆ

ಬಳ್ಳಾರಿ, ಆ.24: ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ನಾಡು ಕಂಡ ಅಪ್ರತಿಮ ಪ್ರತಿಭಾನ್ವಿತ ಜಾನಪದ ಕಲಾವಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ ರವಿ ಅವರು ಬಣ್ಣಿಸಿದರು.
ನಗರದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದ ಸಭಾಂಗಣದಲ್ಲಿ  ಶನಿವಾರ  ಆಯೋಜಿಸಿದ್ದ ನಾಡೋಜ ಬುರ‍್ರಕಥಾ ದರೋಜಿ ಈರಮ್ಮರವರ 10 ನೇ ಪುಣ್ಯಸ್ಮರಣೆ ಅಂಗವಾಗಿ
“ಬುರ‍್ರಕಥಾ ಪರಂಪರೆಯ ಅನನ್ಯತೆ” ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಾಗೂ ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು‌ ಮಾತನಾಡಿದರು.


ಅಶಿಕ್ಷಿತರಾಗಿದ್ದರೂ ತಮ್ಮ ಅಗಾಧ ಸ್ಮರಣ ಶಕ್ತಿಯಿಂದ ಕನ್ನಡ ಮತ್ತು ತೆಲುಗಿನಲ್ಲಿ ಮೌಖಿಕ ಮಹಾಕಾವ್ಯಗಳನ್ನು ನಿರಂತರವಾಗಿ ಹಾಡುತ್ತಿದ್ದ ಇವರ ನಾಲಿಗೆಯ ಮೇಲೆ ಸರಸ್ವತಿ ಕುಳಿತಿದ್ದಳು ಎಂದು ಹೇಳಿದರು.
ಮಹಾನ್ ಪ್ರತಿಭಾವಂತದರೋಜಿ ಈರಮ್ಮ ಅವರ ಮಹಾ ಕಾವ್ಯಗಳು, ಆತ್ಮಕತೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳ ಪಠ್ಯ ಆಗಿರುವುದು ಹೆಮ್ಮೆ. ಇವರ ಪ್ರತಿಭೆ, ಸಂದೇಶಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ತಲುಪುವ ನಿಟ್ಟಿನಲ್ಲಿ ಸರಕಾರ, ಸಂಘ ಸಂಸ್ಥೆಗಳು ಶ್ರಮಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಅಳಿವಿನಂಚಿನಲ್ಲಿರುವ ಜಾನಪದ, ಅಲೆಮಾರಿ ಬುಡಕಟ್ಟು ಕಲಾಪ್ರದರ್ಶನಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾಡಿನ ಜನತೆ ಆತ್ಮವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಮಾಧ್ಯಮದ ಭರಾಟೆಯಲ್ಲಿ ಜನಪದ ಕಲಾಪ್ರಕಾರಗಳ ಮೂಲಸ್ವರೂಪಕ್ಕೆ ಧಕ್ಕೆ ಬಂದಿದೆ ಎಂದು ವಿಷಾಧಿಸಿದ ಡಾ. ರವಿ ಅವರು ಪ್ರಜ್ಞಾವಂತ ಸಮಾಜ ರಕ್ಷಣೆ ನೀಡುವ  ಅಗತ್ಯ ಇದೆ ಎಂದು ತಿಳಿಸಿದರು.

ಹಗಲುವೇಷಗಾರರ ಸಾಮಾಜಿಕ‌ ಸ್ಥಿತಿ ಗತಿ ಶೋಚನೀಯವಾಗಿದೆ. ನಾಡೋಜ ದರೋಜಿ ಈರಮ್ಮ ಅವರ ಕುರಿತು ಹೆಚ್ಚೆಚ್ಚು ಸಂಶೋಧನೆ, ದಾಖಲೀಕರಣ ಆಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಶಿಕ್ಷಕರನ್ನು ತಯಾರು ಮಾಡುವ ಬಿಇಡಿ ಕಾಲೇಜಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ‌ ಪಾತ್ರವಹಿಸುವ ಶಿಕ್ಷಕರು, ಭಾವಿ ಶಿಕ್ಷಕರಿಗೆ ಈರಮ್ಮ ಅಂತಹ ಮಹಾನ್ ಸಾಧಕಿಯ ಪರಿಚಯ ಅತ್ಯಗತ್ಯ ಎಂದರು.


ವಿಶೇಷ ಉಪನ್ಯಾಸ ನೀಡಿದ ಹಂಪಿ ಕನ್ನಡ ವಿವಿ ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಪ್ರೊ.‌ಚಲುವರಾಜು ಅವರು, ಊರೂರುಗಳಿಗೆ  ಬೀಕ್ಷಾಟನೆಗೆ ಹೋಗುತ್ತಿದ್ದ ಕಾವ್ಯದ ಗಣಿ ನಾಡೋಜ ದರೋಜಿ ಈರಮ್ಮ ಸಮಾಜದಲ್ಲಿ ಜ್ಞಾನ ಬಿತ್ತುತ್ತಿದ್ದಳು ಎಂದು ಶ್ಲಾಘಿಸಿದರು.
ತಮ್ಮ ಮೌಖಿಕ‌ ಕಾವ್ಯದ ಮೂಲಕ ಸಮಾಜದಲ್ಲಿ ಮಾನವೀಯತೆ, ಸಾಮರಸ್ಯ ನೀಡಿದ ಈರಮ್ಮ ಸಮಾಜ‌ ಸುಧಾರಕರಾಗಿದ್ದರು ಎಂದರು.
ದೇಶದಲ್ಲಿ ರಾಮಾಯಣ ಪ್ರಜ್ವಲವಾಗಿ ಬೆಳೆಯುವಲ್ಲಿ ಬಹುರೂಪಿ,  ಅಲೆಮಾರಿ ಕಲಾವಿದರ ಪಾತ್ರ ಅನನ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಹಂಪಿ ಕನ್ನಡ‌ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ ಎಂ‌ ಮೇತ್ರಿ ಅವರು ಮಾತನಾಡಿ,  ಸಮಾಜ ಅಲೆಮಾರಿ, ಅರೆ ಅಲೆಮಾರಿಗಳನ್ನು‌ ನೋಡುವ ನೋಟವನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಮೂರು ದಶಕಗಳಿಂದ  ದರೋಜಿ‌ ಈರಮ್ಮ ಅವರೊಂದಿಗೆ ಸಾಂಸ್ಕೃತಿಕ ಒಡನಾಟವನ್ನು ಸ್ಮರಿಸಿಕೊಂಡು‌ ಭಾವುಕರಾದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅವರು, ಮಹಾನ್ ಪ್ರತಿಭಾವಂತರಾಗಿದ್ದ ನಾಡೋಜ ಬುರ್ರಕಥಾ ಈರಮ್ಮ ಅವರ ಸಂಸ್ಮರಣೆಯ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿ ನಾನು ಪುಣ್ಯಶಾಲಿ.
ಅಧ್ಯಕ್ಷತೆಯ ಈ ಗೌರವ ದೊಡ್ಡ ಪ್ರಶಸ್ತಿಗೆ ಸಮ ಎಂದರು.
ಪ್ರಶಸ್ತಿ ಪ್ರದಾನ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ಸಾಹಿತಿ ಡಾ. ನಿಂಗಪ್ಪ ಮುದೇನೂರು, ಕನ್ನಡ ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಚೋರನೂರು ಟಿ ಕೊಟ್ರಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಹಳೇ ದರೋಜಿಯ ಬುರ‍್ರಕಥಾ ಶಿವಮ್ಮ ಅವರಿಗೆ ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ರಾಷ್ಟ್ರೀಯ ಪ್ರಶಸ್ತಿಯನ್ನು ಕುಲಪತಿ ಪ್ರೊ. ಬಿ.ಕೆ ರವಿ ಅವರು ಪ್ರದಾನ ಮಾಡಿದರು. ಅನಾರೋಗ್ಯ ಕಾರಣದಿಂದ ಮತ್ತೋರ್ವ ಪ್ರಶಸ್ತಿ ಪುರಸ್ಕೃತ ಬುರ‍್ರಕಥಾ ಕಲಾವಿದ ಸೋಮಲಾಪುರ ಬಲಗೊಲ್ಲ ಮಾರೆಪ್ಪ ಉಪಸ್ಥಿತರಿರಲಿಲ್ಲ.
ಸನ್ಮಾನಿತರಾದ ಡಾ. ನಿಂಗಪ್ಪ ಮುದೇನೂರು, ಟಿ ಕೊಟ್ರಪ್ಪ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ. ಶರಣಬಸವನ ಗೌಡ, ಎಇಇ ವಿ. ತಿಪ್ಪೇಸ್ವಾಮಿ ಮಾತನಾಡಿದರು.
ವೇದಿಕೆಯಲ್ಲಿ ಅತಿಥಿಗಳಾಗಿದ್ದ ವೀವಿ ಸಂಘದ ಸಹ ಕಾರ್ಯದರ್ಶಿ ಯಾಳ್ಪಿ ಪಂಪನಗೌಡ,  ಕರ್ನಾಟಕ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಣ್ಣ ಮಾರೆಪ್ಪ, ಕರ್ನಾಟಕ ಜಾನಪದ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ್, ಹೆಚ್.‌ಹಂಪನಗೌಡ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಳೇ ದರೋಜಿಯ ಅಶ್ವ ರಾಮಣ್ಣ, ಜಾನಪದ ಕಲಾವಿದ ಯಲ್ಲನಗೌಡ ಶಂಕರ ಬಂಡೆ  ಉಪಸ್ಥಿತರಿದ್ದರು.
ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ಅವರ ಕುಂಚದಲ್ಲಿ ಅರಳಿರುವ  ಈರಮ್ಮ ಅವರ ರೇಖಾಚಿತ್ರಗಳು,  ಡಾ.ಅಶ್ವ ರಾಮು ಸಂಗ್ರಹಿಸಿರುವ ಛಾಯಚಿತ್ರ, ಬರ‍್ರಕಥಾ ಗಾಯನ, ದೊಡ್ಡ ಬಸವ ಗವಾಯಿ ಹಾಗೂ ತಿಪ್ಪೇಸ್ವಾಮಿ ಮುದ್ದಟನೂರು ಸಂಗಡಿಗರ
ತತ್ವಪದ, ಜಾನಪದ ಗೀತಾಗಾಯನ, ವಚನ ಗಾಯನ ಮತ್ತು ಸತ್ಯಂ ಬಿಇಡಿ ವಿದ್ಯಾರ್ಥಿಗಳ ಜನಪದ ನೃತ್ಯ ಪ್ರದರ್ಶನ ಗಮನ ಸೆಳೆದವು.
ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದ  ಪ್ರಾಂಶುಪಾಲ ಡಾ. ಸತೀಶ ಹಿರೇಮಠ ಸ್ವಾಗತಿಸಿದರು. ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಅಶ್ವ ರಾಮು ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಯಂ ಬಿಇಡಿ ಕಾಲೇಜಿನ‌ ಪ್ರಾಧ್ಯಾಪಕ ಅಲಂ ಭಾಷ ನಿರೂಪಿಸಿ ವಂದಿಸಿದರು.
ಹಳೇ ದರೋಜಿ ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಶನ್ ಹಾಗೂ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದ ಸಹಯೋಗದಲ್ಲಿ ಕಾರ್ಯಕ್ರಮ‌ ಜರುಗಿತು.
——