ನನ್ನೊಳಗಿದ್ದ ನೋವು
ನನ್ನೊಳಗಿದ್ದ ನೋವು
ಒಳಗೇ ಬೆಳೆಬೆಳೆದು
ಭುಸುಗುಡುವ ಹಾವಾಯಿತು,
ಪರಿಸರಕೆ ವಿಷವೂಡಿತು.
ನನ್ನೊಳಗಿದ್ದ ನೋವು
ಒಳೊಳಗೇ ಮಸೆದು
ಸಾರವೆಲ್ಲ ಕೀವಾಯಿತು,
ದೇಹದೊಳಗೇ ವಿಷವಾಯಿತು.
ನನ್ನೊಳಗಿದ್ದ ನೋವ
ಹೊರಕಳಿಸುವ ಯತ್ನ
ಇನ್ನಿಲ್ಲದಂತೆ ನೆಲಕಚ್ಚಿತು,
ಕಣಕಣವೂ ಹೊರಳಾಡಿತು.
ದೂರದಿಂದ ತೇಲಿಬಂದ
ಮನಮಿಡಿಯುವ ನಾದ
ಸೆಳೆದುಕೊಂಡಿತು ಮನವನ್ನು,
ಜೊತೆಗೋಡಿತು ನೋವೂ!
ನನ್ನೊಳಗಿದ್ದ ನೋವೀಗ
ವಿಶ್ವದಾಂತರ್ಯದಲಿ ಲೀನ.
ವಿಶ್ವವೈವಿಧ್ಯದಲಿ ನೋವೆಲ್ಲಿ?
ಅಣುಅಣುವೂ ಗಾನತಲ್ಲೀನ.
ನನ್ನೊಳೀಗ ನೋವಿಲ್ಲ.
ಇಹುದು ಚೈತನ್ಯದ ಕಾವು.
ಚಿನ್ಮಯದ ತೋಟದೊಳಗೆ
ನಾನೀಗ ನಸುಬಿರಿದ ಹೂವು!
-ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು