ಅನುದಿನ ಕವನ-೧೩೩೫, ಕವಯಿತ್ರಿ: ಜಯಲಕ್ಷ್ಮಿ ಪಾಟೀಲ್, ಬೆಂಗಳೂರು, ಕವನದ ಶೀರ್ಷಿಕೆ: ನನ್ನ ರಕ್ತ ಕುದಿಯುವುದಿಲ್ಲ

ನನ್ನ ರಕ್ತ ಕುದಿಯುವುದಿಲ್ಲ

ನನ್ನ ರಕ್ತ ಕುದಿಯುವುದಿಲ್ಲ
ನೀನು ನನ್ನ ಮನೆಯ ಮಗುವಲ್ಲ

ನನ್ನ ರಕ್ತ ಕುದಿಯುವುದಿಲ್ಲ
ನಿನ್ನ ನನ್ನ ಧರ್ಮ ಜಾತಿ
ಊರು ಕೇರಿ ಒಂದೇ ಅಲ್ಲ

ನನ್ನ ರಕ್ತ ಕುದಿಯುವುದಿಲ್ಲ
ನಿನ್ನ ನೋವು ಸಾವು ನಾನಪ್ಪಿದ ಸಿದ್ಧಾಂತಕ್ಕೆ ಒಳಪಡುವುದಿಲ್ಲ

ನನ್ನ ರಕ್ತ ಕುದಿಯುವುದಿಲ್ಲ
ನಿನ್ನೂರಲ್ಲಿ ನಾ ನಂಬಿದ ಪಕ್ಷದ ಆಳ್ವಿಕೆಯಲ್ಲಿ ಅತ್ಯಾಚಾರಗಳು ನಡೆಯುವುದಿಲ್ಲ

ನನ್ನ ರಕ್ತ ಕುದಿಯುವುದಿಲ್ಲ
ನಿನ್ನ ಮೇಲಿನ ಅತ್ಯಾಚಾರಕ್ಕೆ ನಿನ್ನ ಸಾವಿಗೆ ನಿನ್ನ ಚೆಲುವು ನಗು ಬಟ್ಟೆ ಕಾರಣ ಅಲ್ಲ ಅನ್ನುವುದನ್ನು ನಾನು ನಂಬುವುದಿಲ್ಲ

ಇಲ್ಲ ನನ್ನ ರಕ್ತ ಕುದಿಯುವುದಿಲ್ಲ


– ಜಯಲಕ್ಷ್ಮಿ ಪಾಟೀಲ್, ಬೆಂಗಳೂರು