ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಪ್ರೊ. ಎಂ ಎಂ ಕಲ್ಬುರ್ಗಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅಶೋಕ ಶೆಟ್ಟರ್ ಅವರು ವಾಚಿಸಿದ್ದ ಕವಿತೆ ಕಣ್ಣೀರಿನ ಶ್ರಾವಣ!
ಕಣ್ಣೀರಿನ ಶ್ರಾವಣ
ಧಾರವಾಡದಲ್ಲಿ ಈ ಶ್ರಾವಣ
ಮಳೆಯ ತೇರನೆಳೆಯಲಿಲ್ಲ
ರೊಜ್ಜು ರಾಡಿ ಆಗಲಿಲ್ಲ.
ತಿಂಗಳುಗಟ್ಟಲೇ ಸೂರ್ಯನ ಮುಖ ನೋಡದ ಮಳೆಗಾಲದ ಊರು
ವಾರಗಟ್ಟಲೇ ಹೋಗಲಿ
ದಿನಗಟ್ಟಲೆಯೂ
ಮಳೆಯಾದುದ ಈ ಸಲ ಈ ಪಾಪಿ ಕಣ್ಣುಗಳು ನೋಡಲಿಲ್ಲ.
ಈ ಮಳೆಗಾಲದ ಧಾರವಾಡ
ಧಾರವಾಡವೇ ಅಲ್ಲ.
ಪಾಪಿ ಕಣ್ಣುಗಳಿಗೆ ನೋಡಲು ಈ ಸಲ ಬೇರೆಯದೇ ಇತ್ತು.
ಬೆಳಿಗ್ಗೆ ಬೆಳಿಗ್ಗೆ ಮನೆ ಹೊಕ್ಕು
ಮಲ್ಲೇಶಪ್ಪ ಕಲಬುರ್ಗಿಯ ಹಣೆಗೆ ಗುಂಡಿಕ್ಕಿದ್ದು ಘಟಿಸಿದ ಊರು
ಧಾರವಾಡವೆಂದರೆ
ಇನ್ನು ನಿರಾಳವಾಗಿರುವದೆಂತು,
ಮುಂದೆ ಮಳೆಗಾಲ ಪಸಂದಾಗಿ ಆದಾಗ
ಜಿಟಿಜಿಟಿಮಳೆಯೊಂದಿಗೆ ರಕ್ತವೂ ಸುರಿಯಲಿಕ್ಕಿಲ್ಲವೆಂದು
ನಂಬುವದೆಂತು… …
-ಪ್ರೊ. ಅಶೋಕ ಶೆಟ್ಟರ್, ಧಾರವಾಡ
—–