ಅನುದಿನ ಕವನ-೧೩೪೧, ಕವಯಿತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು

ತಿಂಗಳ ಕೊನೆ ವಾರದಲ್ಲಿ ಸಿನೆಮಾ – ಗಿನೆಮಾ
ಪಾರ್ಟಿ ಪಬ್ಬು ಯಾವುದೂ ಬೇಡ
ಮನೆಲೇ ಯಾವುದಾದರೂ ಸಿನೆಮಾ ನೋಡೋಣ
ಎನ್ನುವ ಅವಳಿಗೆ..
ಒಂದನೇ ತಾರೀಖಿಗೆ ಅವನ ಇಎಮ್ಐ ಕಟ್ ಆಗುವುದು ಗೊತ್ತಿರುತ್ತದೆ..
ಮತ್ತು ಅವನು ಅದನ್ನು ಹೊಂದಿಸಲು ಅವಳಿಗೆ ಗೊತ್ತಾಗದಂತೆ ಪರದಾಡುವುದು ಕೂಡ..

ಈ ವಾರ ಎಲ್ಲೂ ಹೋಗೋದು ಬೇಡ,
ಇಲ್ಲೇ ಐಸ್ಕ್ರೀಂ ತಿನ್ನೋಣ, ನೀನು ಯಾವ ಡ್ರೆಸ್ ಹಾಕ್ಕೊಂಡರೂ ಓಕೆ ಎನ್ನುವ ಅವನಿಗೆ,
ಅವಳ ತಿಂಗಳ ತಾರೀಖುಗಳು ಗೊತ್ತು..
ಅವಳು bloat ಆಗಿ uncomfortable ಆಗಿ
ಯಾವ ಬಟ್ಟೆನೂ ಸರಿ ಹೋಗ್ತಿಲ್ಲ ಅಂತ
ಸಿಡುಕುವುದು ಕೂಡ..

ನಾನಂತೂ ಇನ್ನು ಸಣ್ಣ ಆಗೋವರೆಗೂ ಶಾಪಿಂಗ್ ಮಾಡೋದಿಲ್ಲ, ಹೊರಗಡೆ ತಿನ್ನೋದಿಲ್ಲ
ಅಂತ ಘೋಷಿಸುವ ಇಬ್ಬರಿಗೂ‌ ಗೊತ್ತಾಗಿದೆ
ಸಂಬಳದ ದಿನ ದೂರವಿದೆಯೆಂದು..
ತಿಂಗಳ ಕೊನೆಯ ದಿನಗಳಲ್ಲಿ ಲಾಂಗ್ ಡ್ರೈವ್ ಕಡಿಮೆಯಾಗುತ್ತದೆ..
ಪೆಟ್ರೋಲ್ ಬಂಕಿನ ಅವನ ಭೇಟಿಗಳು ಕೂಡ..
ತಿಂಗಳ ಕೊನೆಯ ದಿನಗಳಲ್ಲಿ ಅವಳು ಹೇಗಿದ್ದರೂ
ಅವನಿಗೆ ಚಂದವೇ..
ಪಾರ್ಲರ್ ನ ಅಗತ್ಯವೇ ಇರುವುದಿಲ್ಲ..

ಆದರ ಒಟ್ಟಿಗೆ ಅಡಿಗೆ ಮಾಡುತ್ತಾರೆ..
ಕಿಚನ್ ಖುಷಿಗಳು ಮುತ್ತುಗಳಾಗಿ ವಿನಿಮಯವಾಗುತ್ತವೆ..
ಗಾಡಿ ಪಾರ್ಕ್ ಮಾಡಿ ನೆರಳಲ್ಲಿ ಕೈಹಿಡಿದು ನಡೆಯುತ್ತಾರೆ..
ಬಾಲ್ಕನಿಯಲ್ಲಿ ಕಾಫಿ ಹಿಡಿದು ಕೂರುತ್ತಾರೆ..
ಪುಸ್ತಕ ಓದುವಾಗ ಕಾಲ್ಬೆರಳುಗಳು ಮಾತಾಡಿಕೊಳ್ಳುತ್ತವೆ.
ಕಿಟಕಿಯ ಬಳಿಯ ಅಪ್ಪುಗೆಗಳಿಗೆ ಮಳೆನೀರು ಸಾಕ್ಷಿಯಾಗುತ್ತದೆ..
ತಿಂಗಳ ಕೊನೆಯ ದಿನಗಳು ಇನ್ನಷ್ಟು
ಸಾವಧಾನವಾಗಿ ನೆಮ್ಮದಿಯಾಗಿ ಕಳೆಯುತ್ತವೆ..


-ಸಮುದ್ಯತಾ ಕಂಜರ್ಪಣೆ, ಬೆಂಗಳೂರು
—–