ಹೊಸಪೇಟೆ (ವಿಜಯನಗರ) ಸೆ. 4: ಪ್ರಾಣಿಗಳ ಮೇಲೆ ಪ್ರತಿಯೊಬ್ಬರು ದಯಾಗುಣವಿಟ್ಟುಕೊಳ್ಳಬೇಕು ಎಂದು ಶಾಸಕ ಹೆಚ್ ಆರ್ ಗವಿಯಪ್ಪ ಅವರು ಹೇಳಿದರು.
ತಾಲೂಕಿನ ಕಮಲಾಪುರದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜಿಯಾಲಾಜಿಕಲ್ ಅವರಿಂದ ಜಿಯಾಲಾಜಿಕಲ್ ಪಾರ್ಕನಲ್ಲಿ ಬುಧವಾರ ಆಯೋಜಿಸಿದ್ದ ಕೇಸರಿ ಹೆಸರಿನ ಗಂಡು ಸಿಂಹದ 9ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದಯವಿಲ್ಲದ ಧರ್ಮ ಅದಾವುದಯ್ಯ ದಯವೇ ಬೇಕು ಸಕಲ ಪ್ರಾಣಿಗಳಲ್ಲಿ ಎಂದು ಜಗಜ್ಯೋತಿ ಬಸವೇಶ್ವರರು ಹೇಳಿದ ವಚನದ ಸಾಲುಗಳನ್ನು ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು. ಪ್ರಾಣಿಗಳ ಸಂತತಿಯು ನಿರಂತರ ಮುಂದುವರೆಯುವ ಹಾಗೆ ಪ್ರಾಣಿಗಳನ್ನು ರಕ್ಷಣೆ ಮಾಡುವ, ಅವುಗಳನ್ನು ಉಳಿಸಿಕೊಂಡು ಹೋಗುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಈಗಿನ ದಿನಗಳಲ್ಲಿ ಪ್ರಕೃತಿ ನಮಗೆ ತುಂಬಾ ಅತ್ಯವಶ್ಯಕ. ಪರಿಸರಕ್ಕೆ ಮತ್ತು ಮಾನವರಿಗೆ ಸಹಕಾರಿಯಾಗಿರುವ ಪ್ರಕೃತಿಯನ್ನು ಹಾಗೂ ಪ್ರಾಣಿಗಳನ್ನು ಉಳಿಸಿಕೊಳ್ಳವುದು ಈಗಿನ ಅತೀ ಅವಶ್ಯಕತೆಯಾಗಿದೆ ಎಂಬುದನ್ನು ಮುಖ್ಯವಾಗಿ ಪ್ರಾಣಿ ಸಂಗ್ರಹಾಲಯ, ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿ ಅರಿಯಬೇಕಿದೆ ಎಂದು ತಿಳಿಸಿದರು..
ಪ್ರಾಣಿಗಳನ್ನು ದತ್ತು ಪಡೆಯುವ ಪದ್ದತಿ ಇದೆ. ಇದು ಅತ್ಯಂತ ಉಪಯುಕ್ತ ಕಾರ್ಯವಾಗಿದೆ.
ಆಸಕ್ತರು, ಪ್ರಾಣಿಗಳನ್ನು ದತ್ತು ಪಡೆಯಲು ಮುಂದೆ ಬರಬೇಕು ಎಂದು ಸಲಹೆ ಮಾಡಿದ ಶಾಸಕರು, ತಾವು ಕೂಡ ಈ ವರ್ಷ ಎರಡು ಪ್ರಾಣಿಗಳನ್ನು ದತ್ತು ಪಡೆಯಲು ಯೋಜಿಸಿದ್ದಾಗಿ ತಿಳಿಸಿದರು.
ಶ್ರೀ ಅಟಲ್ ಬಿಹಾರಿ ವಾಜಪೇಯಿ ಜಿಯಾಲಾಜಿಕಲ್ ಪಾರ್ಕ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ರಾಜೇಶ್ ನಾಯಕ್ ಅವರು ಮಾತನಾಡಿ, ಕಮಲಾಪುರದ ಪ್ರಾಣಿ ಸಂಗ್ರಹಾಲಯದಲ್ಲಿ 33 ಜಾತಿಯ ಒಟ್ಟು 380ಕ್ಕಿಂತ ಹೆಚ್ಚು ಪ್ರಾಣಿಗಳಿವೆ. ಕೇಸರಿ ಸಿಂಹವು 2015ರಲ್ಲಿ ಜನಿಸಿದ್ದು ಇಂದಿಗೆ 9 ವರ್ಷಗಳನ್ನು ಪೂರೈಸಿದೆ ಎಂದು ತಿಳಿಸಿದರು.
ನಮ್ಮ ಭಾಗದ ಪರಿಸರದಲ್ಲಿ ಸಿಂಹಗಳಿಗೆ ಬೇಕಾದ ವಾತಾವರಣವನ್ನು ರೂಪಿಸುವುದು ತುಂಬ ಕಷ್ಟಕರ. ನಾವು ಹಂಪಿಯಂತಹ ಐತಿಹಾಸಿಕ ತಾಣ ಹೊಂದಿದ್ದೇವೆ. ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಜಾಗತಿಕ ಪ್ರಸಿದ್ಧ ಹಂಪಿಯ ಪರಿಸರದಲ್ಲಿ ನಾವಿರುವುದು ನಮಗೆ ಸಾಕಷ್ಟು ಅನುಕೂಲವಿದೆ. ನಮ್ಮ ಮುಂದಿನ ಯೋಜನೆಗೆ ಇದು ಸಹಕಾರಿಯಾಗಲಿದೆ. ಹಂಪಿಯಲ್ಲಿರುವುದರ
ಸದುಪಯೋಗ ಪಡೆದು ಕಮಲಾಪುರದ ಪ್ರಾಣಿ ಸಂಗ್ರಹಾಲಯವನ್ನು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿಸುವ ಮಹತ್ವದ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು. ನಮ್ಮ ಯೋಜನೆಯ ಸಾಕಾರಕ್ಕೆ
ವಿಜಯನಗರ ಜಿಲ್ಲೆಯ ಜನತೆ ಸೇರಿದಂತೆ ಸುತ್ತಲಿನ ಎಲ್ಲ ಭಾಗದ ಜನರ ಸಹಕಾರ
ಅತೀ ಅವಶ್ಯವಿದೆ ಎಂದು ತಿಳಿಸಿದರು.
ಕರಪತ್ರ ಬಿಡುಗಡೆ: ಜಿಯಾಲಾಜಿಕಲ್ ಪಾರ್ಕನ ಸಂಪೂರ್ಣ ಮಾಹಿತಿಯನ್ನು ಪ್ರವಾಸಿಗರಿಗೆ ನೀಡಲು ತಯಾರಿಸಿರುವ ಕರಪತ್ರವನ್ನು ಇದೆ ವೇಳೆ ಶಾಸಕರು ಬಿಡುಗಡೆ ಮಾಡಿದರು.
ಯುಪಿಐ ಐಡಿಗೆ ಚಾಲನೆ: ಕಮಲಾಪುರದ ಪ್ರಾಣಿ ಸಂಗ್ರಹಾಲಯಕ್ಕೆ ಬರುವವರು ಇನ್ಮುಂದೆ ಆನ್ ಲೈನ್ ಮೂಲಕವೇ ಪ್ರವೇಶಾತಿ ಶುಲ್ಕ ಪಾವತಿಸಬಹುದಾಗಿದೆ.
ಪ್ರವಾಸಿಗರ ಪ್ರವೇಶಕ್ಕೆ ಇನ್ನಷ್ಟು ಅನುಕೂಲವಾಗಲಿ ಎಂದು
ಶ್ರೀ ಅಟಲ್ ಬಿಹಾರಿ ವಾಜಪೇಯಿ ಜಿಯಾಲಾಜಿಕಲ್ ಪಾರ್ಕನ ಅಧಿಕಾರಿಗಳು ಹೊಸದಾಗಿ ರಚಿಸಿರುವ ಯುಪಿಐ ಐಡಿಗೆ ಸಹ ಶಾಸಕರು ಚಾಲನೆ ನೀಡಿದರು.
ಪ್ರಾಣಿಗಳ ವೀಕ್ಷಣೆ ನಡೆಸಿದ ಶಾಸಕರು: ಪ್ರಾಣಿ ಸಂಗ್ರಹಾಲಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆಗಮಿಸಿದ್ಧ ಶಾಸಕರು, ಇದೆ ವೇಳೆ ವಿದ್ಯಾರ್ಥಿಗಳ ಜೊತೆ ವಾಹನದಲ್ಲಿ ಸಂಚರಿಸಿ
ಕೇಸರಿ ಸಿಂಹ ಸೇರಿದಂತೆ ವಿವಿಧ ಪ್ರಾಣಿಗಳನ್ನು ವೀಕ್ಷಿಸಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆನಂದ, ಜಿಯಾಲಾಜಿಕಲ್ ಪಾರ್ಕನ ವೈದ್ಯಾಧಿಕಾರಿಗಳಾದ ವಾಣಿ ಹಾಗೂ ದಾದಾಪೀರ, ಕಾಳಪ್ಪ, ಅಂಜಿನಪ್ಪ, ಗುಜ್ಜಲ ನಾಗರಾಜ್, ದೀಪಕ್, ಪ್ರಭಾಕರ ಮತ್ತು ಡಿಎವಿ ಸ್ಕೂಲ್ ವಿದ್ಯಾರ್ಥಿಗಳು, ಜಿಯಾಲಾಜಿಕಲ್ ಪಾರ್ಕನ ಸಿಬ್ಬಂದಿ ಉಪಸ್ಥಿತರಿದ್ದರು.