ಅನುದಿನ ಕವನ-೧೩೫೫, ಹಿರಿಯ ಕವಯಿತ್ರಿ: ಬಿ.ಟಿ.‌ಲಲಿತಾ‌ ನಾಯಕ್, ಬೆಂಗಳೂರು, ಕವನದ ಶೀರ್ಷಿಕೆ: ನಾ ಮೇಲಿನವನು….

ನಾ ಮೇಲಿನವನು…

ನಾ ಮೇಲಿನವನು ಬಲು ದೊಡ್ಡವನು ಎಂದು
ಮೆರೆದಾಡ ಬೇಡ ಗೆಳೆಯ ||
ನಿನಗಿಂತ ಮಿಗಿಲವರು ಇದ್ದಾರೂ ಭುವಿಯಲ್ಲಿ
ಸುಳ್ಳು ಭ್ರಮೆಯಲ್ಲಿ ನೀ ಮುಳುಗಬೇಡ

ಬಲುದೊಡ್ಡ ಚಂದಿರನು ಇರುಳೆಲ್ಲ ಬೆಳಗುವನು
ಮರೆಯಾಗುವನು ಹಗಲ ಕಿರಣದಲ್ಲಿ
ಉರಿಯುವನು ಸೂರ್ಯ ಅವಗಿಂತ ಹಿರಿಯ
ಕಳೆದು ಹೋಗುವನು ಇರುಳ ಸೆರಗಿನಲ್ಲಿ

ಗ್ರಹ ತಾರೆಗಳ ಹೊತ್ತ ಗಗನಕ್ಕೆ ಮರೆಯುಂಟೆ
ಸಾರಿ ಹೇಳಿತೆ ತಾ ಮಿಗಿಲು ಎಂದು
ಅಣುವಲ್ಲಿ ಅಣುವಾದ ಕಣ್ಣಿದ್ದೂ ಕುರುಡಾದ
ನೀ ಕೂಗ ಬಹುದು ಹಾಗೆಂದು

ಮಣ್ಣು ಮೊಳಕೆಯ ಹುಟ್ಟು ಬೀಜವೃಕ್ಷದ ಗುಟ್ಟು
ಬೆರಗುಗೊಳಿಸುವುದಿಲ್ಲವೇನು?
ಗಿರಿ ಝರಿಯ ಒರತೆ ಜೀವರಾಶಿಯ ಚರಿತೆ
ರೋಮಾಂಚಗೊಳಿಸದೇನು?

ಜನನ ಮರಣದ ಒಗಟ ಬಿಚ್ಚಿ ಹೇಳುವೆಯೇನು?
ಲೋಕದೊಳಿತಿಗೆ ನಿನ್ನ ಕಾಣಿಕೆ ಏನು?
ಹೇಳು ಗೆಳೆಯನೆ ಈಗ ಎದೆ ತಟ್ಟಿ ನೀ ಹೇಳು
ಪ್ರಕೃತಿಯ ಹಿರಿತನಕೆ ನೀ ಸಾಟಿಯೇನು?

-ಬಿ.ಟಿ. ಲಲಿತಾ ನಾಯಕ್, ಬೆಂಗಳೂರು
—–