ಒಂದು ಸೊಗಸಾದ ಸಾವು…
ನಿನ್ನ ಧ್ಯಾನಕ್ಕೆ ಬಿದ್ದೆ
ನಕ್ಷತ್ರದಂತೆ ನಾನೀಗ
ಉರಿಯುತಿದ್ದೇನೆ
ಯಾವಾಗ ಬಿದ್ದು ಸಾಯುತ್ತೇನೆಯೋ
ತಿಳಿಯಲೊಲ್ಲದು…
ರಾತ್ರಿಯ ಸಮಯದಲ್ಲಿ
ಕನ್ನಡಿಯನ್ನು ಏನಂತ ನೋಡಲಿ
ನಿನ್ನನ್ನೇ ಮೂಡಿಸಿ ಅದು
ನನಗೆ, ನಿದಿರೆ ಹತ್ತಲೂ ಬಿಡದು…
ಊರ ದಾರಿಗೆ ಯಾರೋ
ಮಾಟ ಮಂತ್ರ ಮಾಡಿಸಿ
ತಂದಿಟ್ಟ ಹೂಗಳ ಸೊಬಗ ಕುರಿತು
ನಾನೇನು ಹೇಳಲಿ
ಎಲ್ಲರೂ ಭಯಭೀತರಾಗಿ ಓಡುತಿದ್ದಾರೆ
ನನಗೋ ನಿನ್ನದೆ ಊರ ದಾರಿಯ ಚಿಂತೆ…
ಕಣ್ಣಿಗೆ ಹಚ್ಚಿದ ಕಾಡಿಗೆ
ನಿನ್ನದೆ ದಾರಿಗೆ ಸುಂಕ ತೆತ್ತುತಿದೆ
ನೀ ಹೊರಟ ಊರು-ಕೇರಿ-ಗಲ್ಲಿ
ವಠಾರ ಬಡಾವಣೆಗಳ ಸಾಲು ಮನೆಗಳಲ್ಲಿ
ನೀನಿರುವ ಸುದ್ದಿ ತರುವ
ಒಂದು ಪಾರಿವಾಳ ಎಲ್ಲಿದೆಯೋ ಎಂಬುದು
ನನಗೆ ತಿಳಿಯುವುದಾದರೆ ಹೇಗೆ…?
ನಿನ್ನ ಶಪಿಸಲಷ್ಟೆ ಅರ್ಹಳು ನಾನು
ಪ್ರೀತಿಸಿದ ತಪ್ಪಿಗೆ ಜೀವಮಾನ
ಕೊರಗುವ ನಿಟ್ಟುಸಿರಿದೆಯಲ್ಲವ
ಅದು ಕೂಡ ಒಂದು ಸಾವು…
-ಸಿದ್ದುಜನ್ನೂರ್, ಚಾಮರಾಜ ನಗರ
—–