ಬೆಂಗಳೂರು, ಸೆ. 26: ವಿಜ್ಞಾನದ ಬೆಳವಣಿಗೆಯಿಂದ ಮಾತ್ರ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಭಾರತೀಯ ವಿಜ್ಞಾನ ಮಂದಿರ ಸಂಸ್ಥೆಯ (IISC) ಜೆ.ಎನ್.ಟಾಟಾ ಸಭಾಂಗಣದಲ್ಲಿ ನಡೆದ ಅಭೂತಪೂರ್ವ ಕಾರ್ಯಕ್ರಮದಲ್ಲಿ 2022 ಮತ್ತು 2023 ನೇ ಸಾಲಿನ ವಿಜ್ಞಾನಿ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳ ಸಾಧನೆ ಯುವ ಪೀಳಿಗೆಗೆ ಆದರ್ಶ. ಇವರ ಸಾಧನೆ ವಿಜ್ಞಾನ-ತಂತ್ರಜ್ಞಾನದಲ್ಲಿ ಯುವ ಪೀಳಿಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲ ಆಗುತ್ತದೆ ಎಂದು ಶ್ಲಾಘಿಸಿದರು.
ಸಿ.ಎನ್.ರಾವ್ ಅವರ ಸಾಧನೆ ಇಡಿ ಮನುಷ್ಯ ಕುಲದ ಹೆಮ್ಮೆ. ವಿಜ್ಞಾನದ ಬೆಳವಣಿಗೆಗೆ ಇವರ ತುಡಿತ ಶ್ಲಾಘನೀಯ. ಕರ್ನಾಟಕ ರಾಜ್ಯ ವಿಜ್ಞಾನ-ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ನಂಬರ್ ಒನ್ ಇದ್ದೇವೆ. ಈ ವಿಜ್ಞಾನ ತಂತ್ರಜ್ಞಾನದ ಫಲ ಜನ ಸಾಮಾನ್ಯರಿಗೆ ತಲುಪಬೇಕು ಎಂದು ಆಶಿಸಿದರು. ಬೆಂಗಳೂರು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಆಗಿದೆ ಎಂದರೆ ಇದರಲ್ಲಿ ಹಲವು ವಿಜ್ಞಾನಿಗಳ, ತಂತ್ರಜ್ಞರ ಕೊಡುಗೆ ಇದೆ ಎಂದರು. ವಿಜ್ಞಾನದ ಆಸಕ್ತಿ ಹೆಚ್ಚಿ, ವಿಜ್ಞಾನಿಗಳ ಸಂಖ್ಯೆ ಹೆಚ್ಚಾದರೆ ದೇಶದ ಬೆಳವಣಿಗೆ ಸಾಧ್ಯ. ಸಮಾಜದ ತಾರತಮ್ಯ ಅಳಿಯಬೇಕಾದರೆ ಎಲ್ಲಾ ಜಾತಿ, ಧರ್ಮ, ವರ್ಗಗಳಿಗೆ ಸಮಾನ ಅವಕಾಶಗಳು ಸಿಗುವಂತಾಗಬೇಕು ಎಂದರು. ಗ್ರಾಮೀಣ ಭಾಗದ ಹಲವರು ವಿಜ್ಞಾನಿಗಳಾಗಿ ಪ್ರಶಸ್ತಿ ಪುರಸ್ಕೃತರಾಗಿರುವುದು ಖುಷಿಯ ವಿಚಾರ.
ಪ್ರತಿಭೆ ಅನುವಂಶೀಯ ಅಲ್ಲ. ಅವಕಾಶ ಮತ್ತು ನಿರಂತರ ಶ್ರಮದಿಂದ ಪ್ರತಿಭೆ ವಿಸ್ತಾರಗೊಳ್ಳುತ್ತದೆ ಎಂದರು. ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್ , ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್.ಎಸ್.ಬೋಸರಾಜು ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಬಹಳಷ್ಟು ಆದ್ಯತೆ ನೀಡಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದ ಅಭಿವೃದ್ಧಿ ಗೆ ಪೂರಕವಾಗುವ ಹಾಗೂ ರೈತ ಸಮುದಾಯಕ್ಕೆ ನೆರವಾಗುವಂತಹ ತಂತ್ರಜ್ಞಾನ ಆಧಾರಿತ ಯೋಜನೆಗಳನ್ನು ರೂಪಿಸುವತ್ತ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಮುಂದಾಗಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಹೇಳಿದರು.