ರೂಪಕಗಳ ಮಾತು…
ಈ ಉಸಿರು ನನ್ನ-
ನಿನ್ನ ನಡುವಿನ ಸೇತುವೆ, ಅಂದೆ.
ಕಲ್ಪನಾ ಲೋಕ ಕವಿಗಳದು; ವಿಜ್ಞಾನ-
ಲೋಕ ವಾಸ್ತವ, ಅಂದಳವಳು.
ಅದು ಕಲ್ಪನೆ ಅಲ್ಲ;
ಅದೊಂದು ರೂಪಕ ಅಂದೆ.
‘ರೂಪಕ’ ಅಂದರೆ, ಮತ್ತೆ ಕೊಂಕು
ನುಡಿದಳು.
ಮೂರ್ತ ಅಮೂರ್ತ-
ಗಳ ನಡುವಿನ ಬೆಸುಗೆ, ಅಂದೆ.
ಎಲ್ಲ ಗೊಂದಲಮಯ,
ಅಂದಳವಳು.
ಗೊಂದಲವಿದ್ದಲ್ಲೆ ಸೃಜನಶೀಲತೆ
ಇರುವುದು, ಅಂದೆ.
ಕುಕ್ಕರ್ ಕೂಗುತ್ತಿದೆ,
ಉಪಮೆ ಸಾಕು ಅರ್ಥವಾಗಲಿಲ್ಲ
ನಿಮ್ಮ ಮಾತು, ಎಂದಳು.
-ಎಂ.ಎಸ್.ರುದ್ರೇಶ್ವರ ಸ್ವಾಮಿ, ಬೆಂಗಳೂರು
—–