ಹೊಸಪೇಟೆ, ಅ.9: ನಗರದ ಆಕಾಶವಾಣಿ ಬಳಿಯ ನಿವಾಸಿ ಕರ್ನಾಟಕ(ತುಂಗಭದ್ರಾ)ಗ್ರಾಮೀಣ ಬ್ಯಾಂಕಿನ ನಿವೃತ್ತ ಸಹಾಯಕ ವ್ಯವಸ್ಥಾಪಕ ಕೃಷ್ಣಮೂರ್ತಿ ಬೇವೂರ್(67) ಬುಧವಾರ ಮಧ್ಯಾಹ್ನ ಮೂರು ಗಂಟೆಗೆ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು,ಓರ್ವ ಪುತ್ರಿ, ಓರ್ವ ತಮ್ಮ, ಇಬ್ಬರು ತಂಗಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಕ್ಯಾನ್ಸರ್ ಗೆದ್ದಿದ್ದ ಕೃಷ್ಣಮೂರ್ತಿ ಅವರು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಆರೋಗ್ಯದಿಂದ ಇದ್ದರು. ವಯೋ ಸಹಜ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಇತ್ತೀಚಿಗೆ ಕಿರಿಯ ಪುತ್ರ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ಎಮ್ಡಿಸಿ ವಸತಿಗೃಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಮೂಲತಃ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದವರಾದ ಕೃಷ್ಣಮೂರ್ತಿ ಅವರು ಅತ್ಯಂತ ಶ್ರಮದಿಂದ ಬದುಕನ್ನು ಕಟ್ಟಿಕೊಂಡಿದ್ದರು.
ಛಲದಿಂದ, ತಮ್ಮ ಹಿರಿಯ ಪುತ್ರ ಗಿರೀಶ್ ಬೇವೂರ್ ಅವರ ಜತೆ ಎಸ್ ಎಸ್ಎಲ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು. ಅಂದಿನ ತುಂಗಭಧ್ರಾ ಗ್ರಾಮೀಣ ಬ್ಯಾಂಕಿನಲ್ಲಿ ದಿನಗೂಲಿ ನೌಕರರಾಗಿ ಸೇರಿ ಹಂತ ಹಂತವಾಗಿ ಸಹಾಯಕ ವ್ಯವಸ್ಥಾಪಕ ಸ್ಥಾನಕ್ಕೆ ಏರಿ ಗಮನ ಸೆಳೆದಿದ್ದರು. ಬ್ಯಾಂಕಿನ ಉದ್ಯೋಗ ಮಾಡುತ್ತಲೇ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಎಂಎ ಪದವಿ ಗಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದರು.
ಬಡತನಕ್ಕೆ ಹೆದರದೇ ಹಿರಿಯ ಪುತ್ರ ಗಿರೀಶ್ ಬಿಇ ಪದವಿ ಹಾಗೂ ಕಿರಿಯ ಪುತ್ರ ಗಂಗಾಧರ್ ಡಿಪ್ಲೋಮಾ, ಪುತ್ರಿ ರಾಧ ಅನಿಲ್ ಬಿಎ, ಬಿಇಡಿ ಪದವಿ ಪಡೆಯಲು ಶ್ರಮಿಸಿದ್ದರು.
ಗುರುವಾರ ಬೆಳಿಗ್ಗೆ 10 ಗಂಟೆಗೆ ಹೊಸಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಂಬನಿ: ಪಾದರಸದ ವ್ಯಕ್ತಿತ್ವ ಹೊಂದಿದ್ದ ಕೃಷ್ಣಮೂರ್ತಿ ಬೇವೂರ್ ಅವರ ನಿಧನಕ್ಕೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಪ್ರಾದೇಶಿಕ ವ್ಯವಸ್ಥಾಪಕ, ಹಿರಿಯ ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಎಜಿಎಂ ಹಾಗೂ ಸಹಪಾಠಿ ಆರ್. ರಾಮನಾಯ್ಕ, ಗುಲ್ಬರ್ಗಾ ವಿಶ್ವ ವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ್, ಹೊಸಪೇಟೆ ಪಟ್ಟಣ ಠಾಣೆಯ ಎಎಸ್ಐ ಮಲ್ಲೇಶಪ್ಪ ದಳವಾಯಿ, ರಾಯಚೂರು ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ್, ಹಂಪಾಪಟ್ಟಣ ಗ್ರಾಮದ ಸರ್ವ ಮುಖಂಡರು ಕಂಬನಿ ಮಿಡಿದಿದ್ದಾರೆ.
——