ಅನುದಿನ ಕವನ-೧೩೮೩, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ, ಕವನದ ಶೀರ್ಷಿಕೆ: ಬದುಕೆಂದರೇ ಹೀಗೇ….

ಬದುಕೆಂದರೆ ಹೀಗೇ……..

ಬದುಕೆಂದರೆ ಹೀಗೇ……..
ಎಲ್ಲೋ ಒಂದೆಡೆ ಗೊತ್ತಿಲ್ಲದ ಜೀವ ಆಕಸ್ಮಾತ್ ಪರಿಚಯವಾಗಿಬಿಡುತ್ತೆ…….ಅಪಾರ ಪ್ರೀತಿ, ಅಭಿಮಾನ, ಗೌರವ ಎಲ್ಲ ಇಟ್ಟುಕೊಳ್ಳುತ್ತೆ…….

ಬದುಕೆಂದರೆ ಹೀಗೇ…………
ಹೊರಟ ದಾರಿಯಲ್ಲೇ ಆಕಾಸ್ಮಾತ್ ಅಪಾಯಕಾರಿ ತಿರುವು ಬಂದುಬಿಡುತ್ತೆ……… ಇನ್ನೇನು ಮಾಡಲಿ ಅನ್ನೋದರೊಳಗೇ ನಿರಾಳವಾದ ಒಂದು ದಾರಿ ಸಿಕ್ಕುಬಿಡುತ್ತೆ…….

ಬದುಕೆಂದರೆ ಹೀಗೇ………..
ನಮ್ಮೆಡೆಗೆ ಒಂದು ಪ್ರೀತಿ ಇದೆ ಅನ್ನೋ ಸಂಬಂಧಗಳೆಲ್ಲ ನೋಡ ನೋಡುವುದರೊಳಗೆ ಉಸುಕಿನ ಮನೆಯಂತೆ ಕುಸಿದು ಅಲ್ಲೊಂದು ಚಂದದ ಮನೆ ಇತ್ತೆಂದೇ ಗೊತ್ತಾಗದಂತಾಗಿಬಿಡುತ್ತೆ………….

ಬದುಕೆಂದರೆ ಹೀಗೇ…………..
ಏನೋ ಅಂದುಕೊಂಡಿರುತ್ತೇವೆ, ಯಾರು ಯಾರನ್ನೋ ನಂಬಿರುತ್ತೇವೆ, ಏನೋ ಆಗಿ, ಯಾರು ಯಾರೋ ಕೊನೆಯಲ್ಲಿ ಯಾರೋ ಆಗಿ ಅದೊಂದು ಎಲ್ಲ ಬಣ್ಣಗಳನ್ನು ಕಲೆಸಿ ಕಪ್ಪು ಬಣ್ಣವಾದಂತಾಗಿ ನಮ್ಮ ಚಂದದ ಬಿಳಿ ಮನಸಿನ ಮೇಲೆ ಒಂದು ಹನಿ ಚೆಲ್ಲಿಬಿಡುತ್ತೆ……. ಎಷ್ಟೇ ತೊಳೆದುಕೊಂಡರೂ ಆ ಕಲೆ ಹಾಗೇ ಉಳಿದು ನಮ್ಮ ಗಮನವೆಲ್ಲ ಆಗಾಗ ಅದರೆಡೆಗೇ ಹೋಗುತ್ತಿರುತ್ತದೆ……….

ಬದುಕೆಂದರೆ ಹೀಗೇ………..
ಸುಮ್ಮನೆ ಸಾಗಬೇಕು…………ಪ್ರೀತಿಯ ಬಲೂನುಗಳ ಹೊತ್ತು, ಬೇಕಿದ್ದವರು ಕೇಳಿ ಪಡೆಯುತ್ತಾರೆ, ಬೇಡವಾದವರು ಸುಮ್ಮನೆ ನೋಡಿ ಹೋಗುತ್ತಾರೆ, ಕೆಲವರು ” ಅಯ್ಯೋ ಇವನ ಅವಸ್ಥೆಯೇ ” ಅಂತ ಕೊಂಕು ನಗೆ ಬೀರಿ ಹೋಗಿಬಿಡುತ್ತಾರೆ.

ಬದುಕೆಂದರೆ ಹೀಗೇ…………
ಬದುಕೆಂದರೆ ಹೀಗೇ………….

-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ
—–