ಎದ್ದುಹೋದ ಆತ್ಮಗಳಿಗೆ ಇಲ್ಲಿ
ಮತ್ತೆ ಮತ್ತೆ ದೇಹ ಸೇರುವ ಆತುರ.
ಕಾಯುತ್ತಾ ಕುಳಿತಿವೆ ಇಲ್ಲೇ ಎಲ್ಲೋ,
ಮೈಯೆಲ್ಲಾ ಕಿವಿಯಾಗಿಸಿಕೊಂಡು
ಕರೆವ ಯಾವುದೋ ಒಂದು ದನಿಗಾಗಿ.
ಆತ್ಮದ ಬಾಗಿಲು ತಿರುತಿರುಗಿ ಬಡಿದು
ಉಪವಾಸದಲ್ಲಿ ಹಿಡಿದಿಡಿದು
ಉಪ್ಪುಖಾರದ ರುಚಿ ತಪ್ಪಿಸಿ
ಸೊಗಸಿನೆಳಸಿಕೆಗೆ ಕಣ್ಣು ಮುಚ್ಚಿಸಿ
ಅರಿಯದ ಮಂತ್ರ ಪಠಣ ಮಾಡಿದ್ದೇ ಬಂತು
ಅಪ್ಪಿಕೊಂಡ ಕತ್ತಲೆಯಲ್ಲಿ
ತಡಕಾಡಿದಾಗ ಸಿಕ್ಕಿದ್ದು,
ದೇವರೇ ಅನ್ನುವ ಸಂಭ್ರಮ
ಬದುಕಿನ ಹೆಮ್ಮೆಯಾಗಿಯೇ ಉಳಿದಂತೆ;
ಆಚರಣೆ ಬದುಕಾಗಿ
ಮೂಲ ಮರೆತ ಸಂಗತಿಯೊಂದು
ಕೊನೆಗೂ ಬೆಳಕಾಗುವುದಿಲ್ಲ.
ಯಾವುದೋ ಹಠಕ್ಕೆ
ಯಾವುದೋ ಛಲಕ್ಕೆ
ಕಾಲದ ಹನಿಗಳು ತೀರಿಹೋಗುವಾಗ
ವೇಷ ತೊಟ್ಟುಕೊಂಡ ಪಾತ್ರ
ರಂಗಪ್ರವೇಶಕ್ಕಾಗಿ ಕಾಯುತ್ತಲೇ ಇರುತ್ತದೆ.
ಪ್ರೀತಿ,
ಆಕಾಲದಲ್ಲಿ ಬೀಳುವ ಮಳೆಹನಿ!
ಬಾಯ್ತೆರೆದು ಕಾಯುವ ಭೂಮಿಯಾಗದೇ
ದಕ್ಕುವುದೇ ಹೂಗಂಧ?
ಮಣ್ಣುಟ್ಟು ನಿಲ್ಲುವ ಹಂಬಲ
ಇನ್ನೂ ತೀರಿಲ್ಲ
ಸಿಗದ ಯಾವುದೋ ಒಂದು
ಅನುಭವಕ್ಕಾಗಿ.
ಕಣ್ಕಟ್ಟು ಮೀರುವ ಸಂಭವ-
-ವನ್ನೂ ಕಂಡಿಲ್ಲ
ದಾರಿಯ ನಡಿಗೆಯ ನೂರು
ಆಕರ್ಷಣಕ್ಕಾಗಿ
-ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಮಂಗಳೂರು
—–