ಬೆಂಗಳೂರು: ಕರ್ನಾಟಕದ ಬುಡಕಟ್ಟು ಜಾನಪದ ಅಧ್ಯಯನ, ಸಂಶೋಧನೆ, ಉಳಿವಿಗಾಗಿ ತಮ್ಮ ಬದುಕನ್ನೇ ಮುಡಿಪಿಟ್ಟ ನಾಡಿನ ಖ್ಯಾತ ವಿದ್ವಾಂಸ ಪ್ರೊ. ಹಿ.ಚಿ ಬೋರಲಿಂಗಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ “ಹಿ.ಚಿ ಸಂಭ್ರಮ, ಬುಡಕಟ್ಟು ಜಾನಪದ ಸಂಪತ್ತಿಗೆ 70 ವರ್ಷ” ಎಂಬ ಧ್ಯೇಯದಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜನಪದರ ಗಟ್ಟಿಧ್ವನಿ, ಜಾನಪದ ಸಂಘಟಕ ಜರಗನಹಳ್ಳಿ ಕಾಂತರಾಜು ತಿಳಿಸಿದರು. ಪ್ರೊ. ಹಿ.ಚಿ. ಅಭಿನಂದನಾ ಸಮಾರಂಭ ಮಡಿಕೇರಿ ತಾಲೂಕು ಕುಶಾಲನಗರದ ವೀರಭೂಮಿ ಜಾನಪದ ಗ್ರಾಮದಲ್ಲಿ ನ. 9 ರಂದು ಶನಿವಾರ ನಡೆಯಲಿದೆ. ಇದೇ ಸಂದರ್ಭದಲ್ಲಿ ಜನಪದ ಸಿರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಕರ್ನಾಟಕ ಜಾನಪದ ಅಕಾಡೆಮಿ ನೀಡುವ ಪ್ರಶಸ್ತಿಗಳು ಅರ್ಹ ಕಲಾವಿದರಿಗೆ ಸಲ್ಲುವುದು ಕಡಿಮೆ ಎಂದು ಅಭಿಪ್ರಾಯಪಟ್ಟಿರುವ ಜನಪದ ಸಿರಿ ಕಾಂತರಾಜು ಅವರು ಈ ಕೊರತೆಯನ್ನು ನೀಗಲು ಅರ್ಹ ನೈಜಕಲಾವಿದರನ್ನು ಗೌರವಿಸುವ ಉದ್ಧೇಶದಿಂದ ಈ ವರ್ಷದಿಂದ ಜಾನಪದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಿದ್ದಾರೆ. ವಿಶೇಷವೆಂದರೆ ಹತ್ತು ಬುಡಕಟ್ಟು ಜನಾಂಗದ ಜನಪದ ಕಲಾತಂಡಗಳಿಗೆ ಪ್ರಶಸ್ತಿ ನೀಡುತ್ತಿರುವುದು ಸ್ತುತ್ಯಾರ್ಹ ಕಾರ್ಯ ಎಂದರೆ ಅತಿಶಯೋಕ್ತಿಯಾಗಲಾರದು. ಜೊತೆಗೆ ಅರ್ಹ ಹತ್ತು ಆಯ್ದ ಕಲಾವಿದರಿಗೆ ಪ್ರಶಸ್ತಿ ಕೊಡುತ್ತಿರುವುದು ಸರ್ಕಾರ ಮತ್ತು ಸಮಾಜಕ್ಕೆ ಮಾದರಿ ಎಂದು ಹೇಳಬಹುದು. ಮೂಲ ಜಾನಪದವನ್ನು ಉಳಿಸುತ್ತಾ, ಬೆಳೆಸುತ್ತಾ ಬರುತ್ತಿರುವಂತಹ ಬುಡಕಟ್ಟು, ಅಲೆಮಾರಿ ಸಮುದಾಯಗಳ ಜಾನಪದ ಕಲಾವಿದರಿಗೆ, ತಂಡಗಳಿಗೆ ಅತಿ ಹೆಚ್ಚಿನ ಪ್ರಶಸ್ತಿಗಳು ಈ ಬಾರಿ ಲಭಿಸುತ್ತಿರುವುದು ಖುಷಿಯ ಸಂಗತಿ. ಒಬ್ಬ ಜನಪದ ಕಲಾವಿದ, ಬರೀ ಜನಪದ ಕಲಾವಿದ ಅಲ್ಲ. ನಮ್ಮ ಸಂಸ್ಕೃತಿಯ ಮೂಲ ಆಶಯಗಳ ಪ್ರತಿಬಿಂಬ. ಹಾಗಾಗಿ ಈ ತರಹದ ವಿಷಯಗಳನ್ನು ಜನರಿಗೆ ಮುಟ್ಟಿಸುವ ಅವಶ್ಯಕತೆ ಹೆಚ್ಚು ಇದೆ ಎಂದು ಜರಗನಹಳ್ಳಿ ಕಾಂತರಾಜು ವಿವರಿಸಿದ್ದಾರೆ.
ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್.ವಿ ಸುರೇಶ್, ಹಾವೇರಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಟಿ.ಎಂ ಭಾಸ್ಕರ, ಡಾ. ಗಂಗೂಬಾಯಿ ಹಾನಗಲ್ ಮೈಸೂರು ಸಂಗೀತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ನಾಗೇಶ್ ವಿ ಬೆಟ್ಟಕೋಟೆ, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಪ್ರಸಾದ್ , ಬಂಜಾರ ಅಕಾಡೆಮಿ ಅಧ್ಯಕ್ಷ ಡಾ. ಎ.ಆರ್ ಗೋವಿಂದಸ್ವಾಮಿ, ಸಾಹಿತಿಗಳು ವಿದ್ವಾಂಸರಾದ ಡಾ. ಕಾಳೇಗೌಡ ನಾಗವಾರ, ಜನ್ನಿ, ಡಾ. ಕುರುವ ಬಸವರಾಜ್, ಪದ್ಮಶ್ರೀ ಡಾ. ರಾಣಿ ಮಾಚಯ್ಯ, ಬೆಂಗಳೂರು ನಗರ ಕಸಾಪ ಅಧ್ಯಕ್ಷ ಎಂ. ಪ್ರಕಾಶಮೂರ್ತಿ, ಜಗದೀಶ್ ಮಲ್ನಾಡ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುತ್ತಾರೆ.
ಜನಪದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು-2024 (ಬುಡಕಟ್ಟು ಜನಾಂಗ ವಿಭಾಗ): ಪುರುಷೋತ್ತಮ ಗೌಡ (ಹಾಲಕ್ಕಿ ಒಕ್ಕಲಿಗ ಸಮುದಾಯ); ದೊಂಡು ಪಾಟೀಲ್ ಧನಗರ್ ಗೌಳಿ (ಗೌಳಿ ಸಮುದಾಯ); ನಾಗರಾಜ ದುರ್ಗಯ್ಯ ಗೊಂಡ (ಗೊಂಡ ಸಮುದಾಯ); ಶಾರದ ಕುಡಿಯ (ಕುಡಿಯ ಸಮುದಾಯ); ಲಿಲ್ಲಿ ಜಾಕಿ ಸಿದ್ಧಿ (ಸಿದ್ಧಿ ಸಮುದಾಯ); ಬಸವರಾಜ್ ಸೋಲಿಗ (ಸೋಲಿಗ ಸಮುದಾಯ)ಜೆ. ಕೆ ರಾಮು (ಜೇನು ಕುರುಬ ಸಮುದಾಯ); ಚಂದ್ರ ನಾಯಕ್ ಕುಡುಬಿ (ಕುಡುಬಿ ಸಮುದಾಯ); ಮಂಜುನಾಥ್ ಸಿ. ಕೆಂಗಲ್ ಹಟ್ಟಿ (ಕಾಡುಗೊಲ್ಲ ಸಮುದಾಯ); ಜ್ಯೋತಿ. ಎನ್ (ಬಂಜಾರ ಸಮುದಾಯ)
ಪ್ರಶಸ್ತಿ ಪುರಸ್ಕೃತ ಗಾಯಕರು: ಆರ್. ಮಹೇಂದ್ರ (ಜಾನಪದ ಗಾಯಕರು); ಆರ್. ರವಿಕುಮಾರ್ (ಜಾನಪದ ಶೈಲಿಯ ಗೀತ ರಚನೆಕಾರರು) ಡಾ. ಪ್ರದೀಪ್ ಕುಮಾರ್ ಎಂ (ಜಾನಪದ ಸಾಹಿತ್ಯ:ಮಹಾಕಾವ್ಯಗಳ ಅಧ್ಯಯನ); ಏಕದಾರಿ ಕೆ.ಎಂ ರಾಮಯ್ಯ (ಕಂಚಿನ ಕಂಠದ ಜಾನಪದ ಗಾಯಕರು); ರಾಚಯ್ಯ (ತತ್ವಪದ ಗಾಯಕರು); ಶಂಕರ್ ದಾಸ್ ಚಂಡ್ಕಳ (ಜಾನಪದ ಕಲಾವಿದರು); ಕೃಷ್ಣೇಗೌಡ (ಸೋಬಾನೆ ಕಲಾವಿದರು); ಶಾಂತಾ ಹೆಗ್ಗೋಡು (ಡೊಳ್ಳು ಕಲಾವಿದರು); ಶ್ರೀಮತಿ ಬುರ್ರಕಥಾ ಕಮಲಮ್ಮ (ಬುರ್ರಕಥೆ ಕಲಾವಿದರು); ಮಹೇಶ್ (ಕಂಸಾಳೆ ಕಲಾವಿದರು); ಪಿ. ಸೋಮು (ಖ್ಯಾತ ಜಾನಪದ ಸಮರ ಕಲೆ ಕಲಾವಿದರು, ಮೈಸೂರು); ಡಾ. ಕೆ.ಪಿ ದೇವರಾಜ್ (ಪೂಜಾ ಕುಣಿತ ಕಲಾವಿದರು); ಕೆ. ಬಿ ಸ್ವಾಮಿ (ಪೂಜಾ ಕುಣಿತ ಕಲಾವಿದರು); ಚೇತನ್ ರಾಜ್ ಓ (ರಂಗಭೂಮಿ ಮತ್ತು ಜಾನಪದ ಕಲಾವಿದ); ಅಖಿಲೇಶ್ ಎಚ್.ಕೆ (ಪಟ ಕುಣಿತ ಕಲಾವಿದರು); ರುದ್ರೇಶ್ವರಯ್ಯ ಎಚ್. ಬಿ (ವೀರಭದ್ರ ಕುಣಿತ ಕಲಾವಿದರು); ಕಿರಣ್ ಗಿರ್ಗಿ (ಖ್ಯಾತ ರಂಗನಿರ್ದೇಶಕರು, ರಂಗ ನಟರು); ಹೆಚ್. ಆರ್ ನಾಗೇಂದ್ರ (ಜಾನಪದ ಕಲೆಗಳ ಪರಿಚಾರಕರು); ನಾಗರತ್ನ ಎಸ್. ಹಿರೇಮಠ (ಯೋಗ ಸಾಧಕಿ, ಬೆಂಗಳೂರು)