ಅನುದಿನ ಕವನ-೧೪೦೮, ಹಿರಿಯ ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ

ಭೃಂಗದ ಭ್ರಮರಕ್ಕೇನು ಅರ್ಥ
ಹೂವಿನ ಮಕರಂದವಿಲ್ಲದಿರಲು

ಮಧುವಿನ ಮಧುರ ಗಾನಕ್ಕೇನು ಅರ್ಥ
ಪುಷ್ಪಗಳಲಿ ಮಾಧುರ್ಯವಿರದಿರಲು

ಹೂವಿನ ಅಂದಕ್ಕೇನು ಅರ್ಥ
ಪತಂಗವ ಆಕರ್ಷಿಸದಿರಲು

ಮನುಜನ ಜೀವನಕ್ಕೇನು ಅರ್ಥ
ಪ್ರೀತಿಯೆಂಬ ರಸವಿಲ್ಲದಿರಲು

ಉಲಿವ ಹಕ್ಕಿಗಳ ಚಿಲಿಪಿಲಿಗೇನು ಅರ್ಥ
ಆಲಿಸುವ ಕಿವಿಗಳಿರದಿರಲು

ಆಡುವ ಮಾತಿಗೇನುಂಟು ಅರ್ಥ
ನುಡಿ ಕರ್ಣ ಮಧುರವಾಗದಿರಲು

ಕವಿಯ ಕಾವ್ಯಕ್ಕೇನುಂಟು ಅರ್ಥ
ಅನುಭವದ ಭಾವವಿಲ್ಲದಿರಲು

ಆಲಿಸುವ ಕರ್ಣಗಳಿಗೇನುಂಟು ಅರ್ಥ
ರಸಗ್ರಹಣವಿಲ್ಲದಿರಲು

ಮನವಿದ್ದರೇನು ಅರ್ಥ
ಸಾಧಿಸುವ ಗುರಿ ಇಲ್ಲದಿರಲು

ಇರಲಿ ಎಲ್ಲರೊಳು ರಸ
ಇರಲಿ ಭಾವ, ಪ್ರೀತಿಯ ರಸವಿರಲಿ

ಅರ್ಥವಿರಲಿ ಜೀವ ಭಾವಕೆ
ಸ್ಫುರಿಸಲಿ  ಜೀವರಸ
ಇದುವೆ ಜೀವ, ಇದು ಜೀವನ

-ಅರುಣಕುಮಾರ ಹಬ್ಬು, ಹುಬ್ಬಳ್ಳಿ
—–