ಅಮರಳಾದಳೇ ಓಬವ್ವ ಚಿತ್ರದುರ್ಗದ ಓಬವ್ವ….!? ಸಂಶೋಧನಾ ಬರಹ -ಡಾ. ಶಿವಕುಮಾರ ಕಂಪ್ಲಿ, ದಾವಣಗೆರೆ

ಅಮರಳಾದಳೇ ಓಬವ್ವ ಚಿತ್ರದುರ್ಗದ ಓಬವ್ವ….!?
-ಡಾ. ಶಿವಕುಮಾರ ಕಂಪ್ಲಿ, ದಾವಣಗೆರೆ

ಜನ ಚರಿತ್ರೆಗಳು ಯಾಕೆ ಮತ್ತು ಹೇಗೆ ಚಾರಿತ್ರಿಕ ರೂಪ ಪಡೆಯುತ್ತವೆ.ಎಂಬ ನೆಲೆಗಳನ್ನ ನೋಡ ಹೊರಟಾಗ ನಮ್ಮ ಎದುರಿಗೆ ಜನ ಚರಿತ್ರೆಗಳ ರೂಪಾಂತರಗಳು ವಿಶಿಷ್ಟವೆನಿಸುತ್ತವೆ. ಇಂತಹ ಎಳೆಯೊಂದರಂತೆ ಚಿತ್ರದುರ್ಗದ ಚಾರಿತ್ರಿಕ ಇತಿಹಾಸದಲ್ಲಿ ತಣ್ಣೀರ ಹೊಂಡದಂತೆಯೇ ತೆಳುವಾದ ಕಥನವಾಗಿ ಕಾಣುವವಳು ಒನಕೆ ಓಬವ್ವ.ತಳ ಸಮುದಾಯದ ಕಥನದಲ್ಲಿ ಅದಕ್ಕೂ ಮಿಗಿಲಾಗಿ ಶ್ರಮಿಕ ಮಹಿಳೆಯ ಕಥನವಾಗಿ ಕಾಣುವ ಕೋಟೆಯ ಕಹಳೆ ಕಾಯಕದ ಮದ್ದಲೆ ಹನುಮಪ್ಪನ ಪತ್ನಿ ಓಬವ್ವೆಯ ಕಥನವು ತನ್ನ ರೂಪಾಂತರಗಳಲ್ಲಿ ಇತಿಹಾಸದ ಜನಪ್ರಿಯ ಕಲ್ಪನೆಗಳನ್ನು ಪಡೆಯುತ್ತಾ ಹೊರಟಿರುವುದು ಅಚ್ಚರಿ ಹುಟ್ಟಿಸುತ್ತದೆ.
ಈ ನಾಡಿನೊಳಗೆ ಪ್ರಭು ಚರಿತ್ರೆಗಳ ಅಬ್ಬರದಲ್ಲಿ ಆಳಿನ ಚರಿತ್ರೆಗಳು ದಾಖಲೆಯ ಸ್ವರೂಪ ಪಡೆವುದು ತೀರಾ ಅಪರೂಪ.ವೀರಗಲ್ಲು, ದಾನ ಶಾಸನಗಳಿರಿದ ತಳವರ್ಗಗಳು ರಾಜ ಪ್ರಭುತ್ವಗಳು ನೀಡಿದ ನಿರೂಪಗಳನ್ನು ಕಾಗದ ಪತ್ರಗಳನ್ನೇ ಚರಿತ್ರೆಯೆಂದು ಸಾಬೀತು ಪಡಿಸಬೇಕಾಗಿದೆ. ಈ ನೆಲೆಯಲ್ಲಿ ದುರ್ಗದ ಮದಕರಿಯ ಕಥನವು ಗಂಡು ಚರಿತ್ರೆ ಎನ್ನುವಾಗಲೇ ಇದಕ್ಕೆ ಎದುರಾಗಿ ಹೆಣ್ಣು ಚರಿತ್ರೆಯ ಇತಿಹಾಸವೂ ಕಡಿಮೆಯಿಲ್ಲ. ದುರ್ಗದ ಚರಿತ್ರೆಯು ಹೆಣ್ಣ ವಿವರಗಳಿಂದಲೇ ಮಹತ್ವ ಪಡೆದಿರುವುದು ವಿಶಿಷ್ಟ. ಈ ನೆಲೆಯಲ್ಲಿ ಇಲ್ಲಿಯ ಓಬವ್ವ ನಾಗತಿ, ನಿಂಗವ್ವ,ಬಂಗಾರವ್ವ,ಪದ್ದವ್ವ ನಾಗತಿ,ಮಲ್ಲವ್ವ ನಾಗತಿ,ಸಿದ್ಧವ್ವ,ಕಡೂರಿ,ಕೆಂಡಗೂಳಿ,ಭಾಗೀರಥಮ್ಮ ,ಓಬವ್ವೆಯರ ಕಥನಗಳು ದುರ್ಗದ ಇತಿಹಾಸದ ಅರ್ಧ ಪುಟಗಳನ್ನೇ ತುಂಬಿವೆ. ಮರಾಠಿಯ,ಹೈದರಾಲಿಯ ಯುದ್ದವಾದಾಗಲ್ಲೆಲ್ಲಾ ಕಾಣುವ ಅತ್ಯಾಚಾರಗಳು ಕಾಮಕೇಳಿಗಳು ದೌರ್ಜನ್ಯಗಳು ,ಅಪಹರಣಗಳು,ಆತ್ಮಹತ್ಯೆಗಳು,ಸಾವುಗಳು ಇತಿಹಾಸದೊಳಗಿನ ಸ್ತ್ರೀಯರ ಘೋರ ನೆಲೆಗಳನ್ನೇ ತೋರುತ್ತವೆ.
ಓಬವ್ವಯೆ ಇತಿಹಾಸವನ್ನು ಚಿತ್ರದುರ್ಗದ ಕೈಫಿಯತ್ತು ,ಬಖೈರು ಹಾಗೂ ಆಕೆಯ ವಂಶಸ್ಥರು ನೀಡಿದ ವಂಶಾವಳಿಗಳಿಂದ ಉತ್ತಮವಾಗಿ ಕಟ್ಟಿದವರು ಪ್ರೊ.ಲಕ್ಷ್ಮಣ್ ತೆಲಗಾವಿ.
ಇತಿಹಾಸವನ್ನು  ಚರಿತ್ರಿಕ  ಆಧಾರ ಗಳಿಂದ  ಗ್ರಹಿಸ ಹೋದವರಿಗೆ ಸದಾ ಪ್ರಭುಗಳ ಕೇಂದ್ರದತ್ತಲೇ ಸುತ್ತುಹಾಕುವ ಚರಿತ್ರೆಯ ಸಾಲುಗಳು ತಮ್ಮ ದಾಖಲಾತಿಗಳನ್ನ ತೋರಿಸುವುದೂ ಪ್ರಭು ಸಂಬಂಧಿಯಾಗಿದ್ದಾಗಲೇ ಅಲ್ಲವೇ? ಈ ನೆಲೆಯಲ್ಲಿ ಪ್ರಭುವಿನ ಶ್ರೇಯಸ್ಸು ಬಯಸಿ, ಸಮಯ ಪ್ರಜ್ಞೆ ಮೆರೆದು, ಚರಿತ್ರೆಯ ಸ್ಥಾನ ಪಡೆದವಳು ಒನಕೆ ಓಬವ್ವ.
ಓಬವ್ವೆಯ ಆ ಕಥನವು ಹೆಚ್ಚು ಜನಪ್ರಿಯಗೊಂಡದ್ದೇ ನಾಗರ ಹಾವು ಸಿನಿಮಾ ಮೂಲಕ.ತ.ರಾ.ಸು. ಅವರ ಮೂರು ಕಾದಂಬರಿಗಳನ್ನು ( ನಾಗರಹಾವು,ಒಂದು ಗಂಡು ಎರಡು ಹೆಣ್ಣು,ಸರ್ಪ ಮತ್ಸರ) ಸೇರಿಸಿಕೊಂಡು ಒಂದು ಚಿತ್ರ ಕಥೆಯನ್ನಾಗಿ ಮಾಡಿಕೊಂಡ ಪುಟ್ಟಣ್ಣ ಕಣಗಾಲ್ ಸಹಜವಾಗಿ ಆಗ ಕಥೆಯೊಳಗೂ ಕೆಲವು ರೂಪಾಂತರಗಳನ್ನು ತಂದರು ಮುಂದೆ ತಮ್ಮ ಮಾರ್ಪಾಡಿನ ಕಾರಣವನ್ನೂ ತ.ರಾ.ಸು.ಅವರಿಗೆ ಮನವರಿಕೆಯಾಗುವಂತೆ ಬಿಡಿಸಿ ಹೇಳಿದರೂ ಕೂಡ. ಈ ಕಥೆಯೊಳಗಿನ ಓಬವ್ವೆಯ ಹಾಡು ದುರ್ಗದ ಕೋಟೆಯ ಚಿತ್ರೀಕರಣದಿಂದ ಮುಂದೆ ಕನ್ನಡ ಚಿತ್ರರಂಗದ ಮರೆಯದ ಹಾಡಾಗಿದ್ದೂ ಇತಿಹಾಸವೇ. ಈ ಹಾಡು ಹುಟ್ಟಿದ ಸಂಗತಿಯನ್ನು ಕುರಿತು ದುರ್ಗದ ಪ್ರಸಿದ್ಧ ಸಾಹಿತಿ ಬಿ.ಎಲ್.ವೇಣು ಅವರು ಈ ರೀತಿ ವಿವರಿಸುತ್ತಾರೆ.  “೧೯೭೦-೭೧ ರಲ್ಲಿ ದುರ್ಗದಲ್ಲಿ ನಾಗರ ಹಾವು ಚಿತ್ರೀಕರಣವನ್ನು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರು ತಮ್ಮ ತಂಡದೊಡನೆ ಆರಂಭಿಸಿದ್ದರು. ದುರ್ಗದ ಆಬಾಲವೃದ್ಧ ಮಹಿಳೆಯರಾದಿಯಾಗಿ ಚಿತ್ರೀಕರಣ ನೋಡಲು ಉತ್ಸಾಹದಿಂದ ಕೋಟೆ ಏರುತ್ತಿದ್ದುದ್ದನ್ನು ನಾನು ನೋಡಿ ಬಲ್ಲೆ. ಏಕೆಂದರೆ ನಾನೂ ಗೆಳೆಯರೊಂದಿಗೆ ಕೋಟೆ ಏರಿದವನೆ.
ಹಿರಿಯ ಸಾಹಿತಿ ತರಾಸು ಅವರ ಕಾದಂಬರಿಗಳ ಆಧಾರಿತ ಎಂಬ ಹೆಗ್ಗಳಿಕೆ ಬೇರೆ. ಆಗೆಲ್ಲ ಚಿತ್ರೀಕರಣ ವೀಕ್ಷಿಸುವವರ ಕಣ್ಣಿಗೆ ಸತ್ಯವಾಗಲೂ ಪುಟ್ಟಣ್ಣನವರೇ ʼಗ್ರೇಟ್ ಹೀರೋ…ʼ ನಮಗ್ಯಾರಿಗೂ ವಿಷ್ಣು,ಅಂಬರೀಷ್,ಆರತಿ ತೀರಾ ಅಪರಿಚಿತರು.
ಪುಟ್ಟಣ್ಣ ನವರಿಗೆ ನಾಗರ ಹಾವು ಚಿತ್ರದ ಯಶಸ್ಸು ಅವರ ಕೆರಿಯರ್ ನಲ್ಲಿ ಅತಿ ಮುಖ್ಯವಾಗಿತ್ತು. ಒಂದೆರಡು ಚಿತ್ರಗಳಾಗಲೇ ಸೋತಿದ್ದವು. ಪುಟ್ಟಣ್ಣ ಕಾದಂಬರಿಗಳನ್ನು ಓದಿ ಬದಿಗಿಟ್ಟು ಸಿನಿಮಾಕ್ಕಾಗಿ ಪಕ್ಕಾ ಚಿತ್ರಕತೆ ಮಾಡಿಕೊಂಡಿದ್ದೆನೆಂದು ಅವರೇ ಹೇಳಿಕೊಂಡಿದ್ದುಂಟು. ಸಾಕಷ್ಟು ಬದಲಾವಣೆಮಾಡಿಕೊಂಡಿದ್ದ ಪುಟ್ಟಣ್ಣ ಕಥೆಗೆ ಅಗತ್ಯವೇ ಇಲ್ಲದ ವೀರ ವನಿತೆ ಒನಕೆ ಓಬವ್ವಳ ಸಾಹಸ ಗಾಥೆಯನ್ನು ಹಾಡಿನ ಮೂಲಕ ಸೇರಿಸಿ ಅಪಾರ ಮಹಿಳಾ ಪ್ರೇಕ್ಷಕರನ್ನು ಸೆಳೆಯುವ ತಂತ್ರಕ್ಕೆ ಶರಣಾಗಿದ್ದರು. ಅದರಲ್ಲಿ ಅವರು ನಂತರದಲ್ಲಿ ಯಶಸ್ವಿಯಾಗಿದ್ದು ಇಂದಿಗೆ ಇತಿಹಾಸ.
ಪುಟ್ಟಣ್ಣ ನವರಿಗೆ ಓಬೆವ್ವೆಯ ಇತಿಹಾಸವನ್ನು ನೆನಪಿಗೆ ತಂದ ಮಹನೀಯರು ನವಭಾರತ ತರುಣ ಕಲಾ ಸಂಘದ ದುರ್ಗದ ಕಲಾವಿದರು.ಇವರು ಆಡುತಿದ್ದ ಅಪಾರ ಯಶಸ್ವಿ ನಾಟಕ ʼರಾಜವೀರ ಮದಕರಿ ನಾಯಕʼ ಮೈಸೂರು ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್, ತಾವಾಗಿಯೇ ಸಂಘದವರನ್ನು ಮೈಸೂರಿಗೆ ಕರೆಸಿ ಆಡಿಸಿ ನೋಡಿದ ಪ್ರಸಿದ್ಧ ನಾಟಕ. ಈ ಬಗ್ಗೆ ಕೇಳಿದ್ದ ಪುಟ್ಟಣ್ಣ ತಾವೂ  ತಮ್ಮ ತಂಡದವರೊಡನೆ ನಾಟಕವನ್ನು ಕಂಡು ಪ್ರಭಾವಿತರಾಗಿ ಸಿನಿಮಾದಲ್ಲಿ ಹಾಡಿನ ಮೂಲಕ ಸನ್ನಿವೇಶವನ್ನು ತರಲು ನಿರ್ಧರಿಸಿದರು. ಓಬವ್ವನ ಕಥೆ ಅಷ್ಟರಲ್ಲಾಗಲೇ ಆರನೇ ತರಗತಿ ಪಠ್ಯದಲ್ಲಿ ನಮಗಿತ್ತು. ಅದನ್ನೇ ಆಧರಿಸಿ ಆರ್. ಎನ್. ಜಯಗೋಪಾಲ್ ಅವರಿಂದ ಹಾಡು ಬರೆಸಿದರು. ಇದಕ್ಕೆ ವೀರೋಚಿತ ರಾಗ ಹಾಕಿದ್ದು ವಿಜಯ ಬಾಸ್ಕರ್.
ಪುಟ್ಟಣ್ಣ ಓಬವ್ವೆಯ ಪಾತ್ರಕ್ಕೆ ಕಲ್ಪನಾ ಅವರನ್ನೇ ಆಯ್ಕೆ ಮಾಡಿಕೊಳ್ಳಲು ನಿರ್ದರಿಸಿದ್ದರು. ಆದರೆ ಚಿತ್ರೀಕರಣದಲ್ಲಿ ತುಂಬಾ ಬ್ಯುಸಿಯಾಗಿದ್ದ ಅವರು ಒಂದು ಹಾಡಿಗೆ ಬಂದು ಹೋಗುವುದು ಆಗುವುದಿಲ್ಲವೆಂದು ಸುದ್ದಿಯಾಯಿತು.ನಂತರ ಅಭಿನಯ ಶಾರದೆಯೆಂದೇ ಖ್ಯಾತರಾಗಿದ್ದ ಜಯಂತಿಯವರನ್ನು  ಆರಿಸಿಕೊಂಡರು ಪುಟ್ಟಣ್ಣ”
ಪುಟ್ಟಣ್ಣನವರು ಚಿತ್ರಿಸಿದ ಈ ಹಾಡಿನ ಚಿತ್ರೀಕರಣ ಮತ್ತು ಇತಿಹಾಸವನ್ನು ಗಮನಿಸಿದರೆ ಅಲ್ಲೂ ಇತಿಹಾಸದ ರೂಪಾಂತರಗಳೇ ಕಾಣುತ್ತವೆ. ಹೈದರಾಲಿಯ ಸೈನಿಕರು ಕಳ್ಳಗಿಂಡಿಯಲ್ಲಿ ನುಗ್ಗುವುದು, ಆ ವೈರಿ ಪಡೆಯನ್ನು ಓಬವ್ವ ಒನಕೆಯಿಂದ ಚಂಡಾಡುವುದು, ಕೊನೆಗೆ ಅಮರಳಾಗುವುದು. ಇಲ್ಲಿ ಬಹುಶಃ ಅಂದಿಗೆ ಅತ್ಯಂತ ಜನಪ್ರಿಯವಾಗಿದ್ದ ತ.ರಾ.ಸು. ಅವರ ದುರ್ಗಾಸ್ತಮಾನವನ್ನು ಯಾಕೋ ಅವರು ಗಮನಿಸಲಿಲ್ಲ. ದುರ್ಗದ ಇತಿಹಾಸ ಕಾರರನ್ನು ಯಾಕೋ ಕೇಳಬೇಕೆಂಬ ಗೊಡವೆಗೂ ಅವರು ಹೋಗಲಿಲ್ಲ.ಆದರೆ ಪುಟ್ಟಣ್ಣ ಅವರ ಜನಪ್ರಿಯತೆಯ ಉತ್ಸಾಹವು ಓಬವ್ವೆಯ ಇತಿಹಾಸವನ್ನೇ ಬದಲಾಯಿಸಿದ್ದು ಮಾತ್ರ ಸತ್ಯ .
ಓಬವ್ವೆಯ ಇತಿಹಾಸ:
ಕೂಡ್ಲಿಗಿ ತಾಲೂಕು ಗುಡೇಕೋಟೆಯ ರಾಮದುರ್ಗದ ಕುದಿರೆಡವು ಗ್ರಾಮದ ಕಹಳೆ ಚಿನ್ನಪ್ಪನ ಮಗಳು ಓಬವ್ವೆಯು ದುರ್ಗದ ಮದಕರಿ ನಾಯಕ ಮದುವೆಯಾದ ಗುಡೇಕೋಟೆಯ ಪದ್ಮವ್ವ ನಾಗತಿ ಹಾಗೂ ಜರಿಮಲೆಯ ಬಂಗಾರವ್ವ ನಾಗತಿಯರೊಂದಿಗೆ ದುರ್ಗಕ್ಕೆ ಬಂದಳು. ಮುಂದೆ ಅಲ್ಲಿಯೇ ಕೋಟೆಯ ಕಹಳೆಯ ಕಾಯಕದ ಮದ್ದ ಹನುಮಪ್ಪನನ್ನು ಮದುವೆಯಾದಳು.ಓಬವ್ವೆಯ ತಂದೆಯೂ ಗುಡೆಕೋಟೆಯ ಪಾಳೆಗಾರರ ಅಚ್ಚುಮೆಚ್ಚಿನ ಕಹಳೆಯ ಸೇವಕನಾಗಿದ್ದ.” ಈಕೆಯ ಅಣ್ಣ ಕುದುರಪ್ಪ ನಿಡುಗಲ್ಲು ಸಂಸ್ಥಾನದ ದೊರಗಳ ಕೋಟೆಯ ಕಾವಲುಗಾರನಾಗಿದ್ದ.ಕುದುರಪ್ಪ ವೀರೋಚಿತ ಕಾವಲಲುಗಾರ. ಒಮ್ಮೆ ಶತ್ರುಗಳು ನಿಡುಗಲ್ಲು ಕೋಟೆಯನ್ನು ಅನಾಮತ್ತಾಗಿ ಮುತ್ತಿದಾಗ, ಹೋರಾಡಿ ಹಲವಾರು ಶತ್ರು ಸೈನಿಕರನ್ನು ಕೊಂದು ವೀರ ಮರಣವನ್ನು ಹೊಂದಿದ್ದ.” ಎಂದು ಎ.ಡಿ. ಕೃಷ್ಣಪ್ಪನವರು ತಿಳಿಸುತ್ತಾರೆ.ಈ ನೆಲೆಯಲ್ಲಿ ಓಬವ್ವೆಯ ವೀರತನ ತನ್ನ ತವರಿನಿಂದಲೇ ಹರಿದು ಬಂದಂತೆ ಕಾಣುತ್ತದೆ. ಗುಡೆಕೋಟೆಯ ಪಾಳೆಗಾರರ ಕೋಟೆಯ ಕಹಳೆಯ ಸೇವಕ ಅಪ್ಪ,ನಿಡುಗಲ್ಲಿನ ಕಾಳಗದಲ್ಲಿ ಹುತಾತ್ಮನಾದ ಅಣ್ಣ ಇದಕ್ಕೆ ಉದಾಹರಣೆಯಂತೆ ಕಾಣುತ್ತಾರೆ.
ದುರ್ಗಾಸ್ತಮಾನ ಕಾದಂಬರಿ ರಚಿಸುವ ಹಿಂದಿನ ಶ್ರಮವನ್ನು, ಮದಕರಿ ನಾಯಕರ ಕಥೆ ಕಟ್ಟುವಾಗಿನ ತೊಡಕುಗಳನ್ನು ಸೂಕ್ಷ್ಮವಾಗಿ ತಿಳಿಸಿರುವ ತರಾಸು ಅವರು ತಮ್ಮ ಆಕರಗಳಿಂದ ನಿರ್ಮಿಸಿಕೊಂಡ ಕಥನ ಚೌಕಟ್ಟನ್ನು ಆರಂಭದಲ್ಲೇ ನೀಡಿದ್ದಾರೆ. ಇವರು ಮದಕರಿಯ ಜನ ಮಾನಸದ ಚರಿತ್ರೆಯನ್ನು ಸವರುತ್ತಲೇ ಆತನೊಳಗಿನ ಜಾತ್ಯಾತೀತ ಧರ್ಮಾತೀತ ಸೊಗಸನ್ನು ಕಾಣಿಸಿದ್ದಾರೆ. ದುರ್ಗದ ದೊರೆಯು “ಜಾತಿ ಮತಗಳೆಲ್ಲ ಮನೆಯ ಒಳಗೆ ದೊರೆಯ ರಸ್ತೆಯಲ್ಲಿ ಅಲ್ಲ” ಎನ್ನುವ ಓಬವ್ವೆಯೊಂದಿಗಿನ ಮಾತು ಹಾಗು ತನ್ನೊಂದಿಗೆ ಆಪ್ತನನ್ನಾಗಿಸಿಕೊಂಡ ಸರ್ದಾರ್ ಖಾನ್, ಅನ್ಯ ನಾಡಿನ ಹರಿಸಿಂಗ್ ,ಗುದಗತ್ತಿ, ವೀರಭದ್ರ ನಾಯಕರೊಂದಿಗಿನ ಆತನ ಕರುಳು ಸಂಬಂಧಗಳು ಇಲ್ಲಿ ಮುಖ್ಯವೆನಿಸುತ್ತವೆ.
ಮದಕರಿಯು ತನ್ನ ಸೈನಿಕರ ಸುಖಕ್ಕಾಗಿ ತನಗೆ ಎದುರಾಗುವ ದೊಡ್ಡ ತೊಂದರೆಯನ್ನೂ ಲೆಕ್ಕಿಸದೇ ನುಗ್ಗಬಲ್ಲ ಧೀರ ಎಂಬಂತೆ ಮುರುಘಾ ಮಠಕ್ಕೂ ಆತನಿಗೂ ಆದ ತಾತ್ವಿಕ ತೊಡಕನ್ನು ನಾಡಿನ ಉಳಿವಿಗೆ ಸೈನಿಕರ ಸುಖವೇ ಮುಖ್ಯ ಎಂಬ ನೆಲೆಯಲ್ಲಿ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.
ದುರ್ಗದ ದೊರೆ ಕೋಟೆ ಮೇಲಿನ ಹಾಡಿನಂತೆ ಕೇವಲ ಹೈದರಾಲಿಯ ಅಕ್ರಮಣದಿಂದ ಹಾಳಾದದ್ದಲ್ಲ ಅದಕ್ಕೂ ಮಿಗಿಲಾಗಿ ದುರ್ಗದ ಕೋಟೆ ಹಾಳಾದದ್ದು ದುರ್ಗದ ದೊರೆಗೆ ಹೆಣ್ಣು ಕೊಟ್ಟ ಆತನ ಮಾವ ಜರಿಮಲೆಯ ಓಬಣ್ಣ ನಾಯಕರ ವಿಶ್ವಾಸ ದ್ರೋಹದಿಂದ. ಹರಪನಹಳ್ಳಿ ಮತ್ತು ರಾಯದುರ್ಗದ ಬೇಡ ಪಡೆಗಳೇ ಕೋಟೆಯ ಕಳ್ಳಗಿಂಡಿಯನ್ನು ತೋರಿದ್ದು ಮತ್ತು ಅಕ್ರಮಣ ಮಾಡಿದ್ದು ಎಂಬುದೇ ಸತ್ಯ. ತಿಂಗಳಾನುಗಟ್ಟಲೆ ದುರ್ಗದ ಅಭೇದ್ಯ ಕೋಟೆಯನ್ನು ಬೇಧಿಸಲಾರದೆ ವದ್ದಾಡುತಿದ್ದ ಕುತಂತ್ರಿ ಹೈದರಾಲಿಯು ತನ್ನ ಕಾರ್ಯ ಸಾಧನೆಗಾಗಿ ಸಾಮಂತ ಪಾಳೆಗಾರರಾಗಿದ್ದ ಹರಪನಹಳ್ಳಿ ಮತ್ತು ರಾಯದುರ್ಗದವರೊಂದಿಗೆ  ಸಮಾಲೋಚಿಸಿದನು. ಕಳ್ಳಗಿಂಡಿಯ ಗುಪ್ತ ದ್ವಾರವನ್ನು ನಿಂತು ತೋರಿದವನೇ ಮದಕರಿಯ ಮಾವ ಜರಿಮಲೆಯ ಓಬಣ್ಣ ನಾಯಕ. ಕಹಳೆಯ ಮದ್ದ ಹನುಮಪ್ಪ ಮನೆಗೆ ಹೊರಟೊಡನೆ ಗುಪ್ತ ದ್ವಾರದ ಮೂಲಕ ನುಸುಳಲು ಆರಂಭಿಸಿದವರು ಹರಪನಹಳ್ಳಿ ಮತ್ತು ರಾಯದುರ್ಗದ ಸೈನಿಕರು. ದುರ್ಗದ ಕೈಫಿಯತ್ತು ಉಲ್ಲೇಖಿಸುವಂತೆ ನಟ್ಟಿರುಳಲ್ಲಿ ಒನಕೆ ಹಿಡಿದ ಓಬವ್ವೆ ಹರಪನಹಳ್ಳಿಯ ನಾಲ್ಕು ಪಟಲು( ನಾಲ್ಕುನೂರು) ಹಾಗೂ ರಾಯದುರ್ಗದ ಸುಮಾರು ಮೂರು ಪಟಲ ಅಂದರೆ ಮುನ್ನೂರು ಸೈನಿಕರನ್ನು ಸೆದೆಬಡಿದಳು. ನಾಯಕರ ಬಗೆಗೆ ಅಸಮಧಾನ ಹೊಂದಿದ ಜರಿಮಲೆಯವರು ಆ ನಂತರ ಹೈದರ್ ಆಲಿಯೊಡನೆ ಸಹಕರಿಸಿ, ಹೆಬ್ಬುಲಿಕಲ್ಲು ಕಡೆಯ ಕಳ್ಳದಾರಿಯಿಂದ ೧೨,೦೦೦ ಸೈನಿಕರನ್ನು ತೆಗೆದುಕೊಂಡು ಕೋಟೆಯ ಒಳಗೆ ಇಳಿದು ದುರ್ಗದ ವಿರುದ್ಧ ಭೀಕರವಾಗಿ ಕಾದಾಡಿದರು.ಕೊನೆಗೆ ಸೋತರು ವಿಜಯದ ನಂತರ ದುರ್ಗಕ್ಕೆ ಎರಡು ಬಗೆದ ಜರಿಮಲೆ ನಾಯಕನನ್ನು ಕಡಿದು ಕೋಟೆಯ ಬಾಗಿಲಿಗೆ ನೇತು ಹಾಕಲಾಯಿತು.ಸೋತ ಹೈದರಾಲಿಯು ನಾಯಕರೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಪೊಗದಿಯನ್ನು ಪಡೆದು ಶ್ರೀರಂಗ ಪಟ್ಟಣಕ್ಕೆ ವಾಪಾಸಾದನು. ಓಬವ್ವೆಗೆ ವೀರೋಚಿತ ಸನ್ಮಾನವನ್ನು ನೀಡಿ ಅಗಸನ ಕಲ್ಲನ್ನು ದತ್ತಿ ಗ್ರಾಮವಾಗಿ ನೀಡಲಾಯಿತು. ಒಟ್ಟು ನಾಲ್ಕು ಬಾರಿ ದುರ್ಗದ ಮೇಲೆ ದಾಳಿ ಮಾಡುವ ಹೈದರ್ ಕೊನೆಯ ಕಾಳಗದಲ್ಲಿ ದುರ್ಗವನ್ನು ವಶಪಡಿಸಿಕೊಂಡ. ಓಬವ್ವೆಯ ಪ್ರಸ್ತಾಪ ಬರುವುದು ಎರಡನೆಯ ದಾಳಿಯಲ್ಲಿ ಹಾಡಿನಲ್ಲಿ ವಿವರಿಸಿರುವಂತೆ ಓಬವ್ವೆ ಆ ಯುದ್ಧದಲ್ಲಿ ತೀರಿಲ್ಲ. ಬದುಕಿದ್ದಳು ಸನ್ಮಾನ ಪಡೆದಳು ಮತ್ತು ಆ ಯುದ್ದದ ನಂತರವೂ ಮೂರು ವರ್ಷಗಳ ವರೆಗೆ ಜೀವಿಸಿದ್ದಳು.ದುರ್ಗದ  ಪತನಕ್ಕೂ ಮೊದಲು ಒಂದು ವರ್ಷ ಮೊದಲು ಅಂದರೆ ೧೭೬೯ ರಲ್ಲಿ ದೈವಾದೀನಳಾದಳು. ಈಕೆಯ ಪಾರ್ಥೀವ ಶರೀರವನ್ನು ರಾಜಮರ್ಯಾದೆಯೊಡನೆ ಪೇಟೆಗಳಲ್ಲಿ ಮೆರವಣಿಗೆ ಮಾಡಿ ಬೆಟ್ಟದ ಮೇಲೆ ತಣ್ಣೀರು ಚಿಲುಮೆಯ ಪೂರ್ವಕ್ಕೆ ಈಕೆಯ ಸಮಾಧಿಯನ್ನು ಮಾಡಿಸಲಾಯಿತು. ಆ ನಂತರ ಈ ಸಮಾಧಿಯ ಮೇಲೆ ಒಂದು ಚಿಕ್ಕ ಕಲ್ಲು ಮಂಟಪವನ್ನು ನಿರ್ಮಿಸಲಾಯಿತು. ಈಗಾಲೇ ಮೂರನೇ ದಾಳಿ ಮತ್ತು ಅಂತಿಮ ದಾಳಿಗೆ ಸಿಲುಕಿದ್ದ ದುರ್ಗದ ಸುತ್ತ ಹೈದರ್ ಆಲಿಯ ಸೈನಿಕರ ಉಪಟಳವನ್ನು ದುರ್ಗಸ್ತಮಾನ ಕಾದಂಬರಿಯು ಸೊಗಸಾಗಿ ಚಿತ್ರಿಸಿದೆ. ಸುತ್ತಲ ಹಳ್ಳಿಗಳನ್ನು ಲೂಟಿ ಮಾಡುತ್ತ ಕಂಡ ಕಂಡ ಹೆಣ್ಣು ಮಕ್ಕಳನ್ನು ಹೊತ್ತು ತಂದು ಅತ್ಯಾಚಾರ ಮಾಡುತ್ತ ಸಾಗಿದ ಹೈದರ್ ಆಲಿಯ ಸೈನ್ಯವು ಬಹುಶಃ ಅಗಸನಕಲ್ಲು ದತ್ತು ಗ್ರಾಮವನ್ನೂ ವಶಪಡಿಸಿಕೊಂಡಿತ್ತು ಹೀಗಾಗಿ ಓಬವ್ವೆಯ ದತ್ತಿಯ ಮಾನ್ಯತೆಯೂ ನಿಂತು ಹೋಯಿತು. ಕೊನೆಯ ಯುದ್ಧದ ದಾಳಿ ಮತ್ತು ಅಕ್ರಮಣದ ಭೀತಿಯಿಂದ ಆಕೆಯ ವಂಶಸ್ಥರು ದುರ್ಗವನ್ನು ಬಿಟ್ಟು ದೊಡ್ಡ ಸಿದ್ಧವ್ವನ ಹಳ್ಳಿಯ ಕಡೆಗೆ ವಲಸೆ ಹೋದರು.ಆದರೂ ಜನ ಮಾನಸದಲ್ಲಿ ದುರ್ಗದ  ವಾಯುವ್ಯ ಮತ್ತು ಉತ್ತರದ ಹನುಮನ ಬಾಗಿಲು ಒನಕೆ ಓಬವ್ವಳ ಕಿಂಡಿಯೆಂದೇ ಪ್ರಸಿದ್ಧಿ ಪಡೆಯಿತು.


-ಡಾ. ಶಿವಕುಮಾರ ಕಂಪ್ಲಿ, ಸಹ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ

ಪರಾಮರ್ಶನಾ ಕೃತಿಗಳು:
೧.  ಭಾರತದ ಧೀರ ಮಹಿಳೆ ಚಿತ್ರದುರ್ಗದ ಒನಕೆ ಓಬವ್ವ: ಪ್ರೊ.ಎ.ಡಿ.ಕೃಷ್ಣಯ್ಯ.ಸಂ.ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್, ಬೆಳಗುಶ್ರೀ ಪ್ರಕಾಶನ ಚಿತ್ರದುರ್ಗ
೨. ಛಲವಾದಿ ವೀರ ವನಿತೆ ಒನಕೆ ಓಬವ್ವ: ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ,ಸೋಸಲೆ ಪ್ರಕಾಶನ ಹೊಸಪೇಟೆ.
೩. ಗುಡೇಕೋಟೆಯ ಗಟ್ಟಿಗಿತ್ತಿ ಒನಕೆ ಓಬವ್ವ: ಭೀಮಣ್ಣ ಗಜಾಪುರ,ಕಾವ್ಯ ಪ್ರಕಾಶನ ಗಜಾಪುರ ಕೊಟ್ಟೂರು.
೪. ದುರ್ಗಾಸ್ತಮಾನ:ತ.ರಾ.ಸು.ಹೇಮಂತ ಪ್ರಕಾಶನ ಬೆಂಗಳೂರು.
೫. ಚಿತ್ರದುರ್ಗದ ಒನಕೆ ಓಬವ್ವ ಚಾರಿತ್ರಿಕ ವಿವೇಚನೆ:ಪ್ರೊ.ಲಕ್ಷ್ಮಣ್ ತೆಲಗಾವಿ,ಪ್ರಸಾರಾಂಗ ಕನ್ನಡ ವಿವಿ.ಹಂಪಿ.
೬.ಹಾಡು ಹುಟ್ಟಿದ ಸಮಯ:ಬಿ.ಎಲ್.ವೇಣು ಲೇಖನ ಗೂಗಲ್.
—–