ಅನುದಿನ ಕವನ-೧೪೧೭, ಕವಿ: ಅಮೋಘವರ್ಷ ವಿ ಪಾಟೀಲ, ಕ್ಯಾಸನೂರು, ಹಾವೇರಿ ಜಿಲ್ಲೆ, ಕವನದ ಶೀರ್ಷಿಕೆ:ಪ್ರಶ್ನಿಸಬೇಕು, ಆದರೆ…!

ಪ್ರಶ್ನಿಸಬೇಕು, ಆದರೆ…!

ಪ್ರಶ್ನಿಸಬೇಕು
ಎಲ್ಲಾ ಒಳಿತು-ಕೆಡುಕುಗಳನ್ನೂ
ಬಂದ, ಸ್ವೀಕಾರ ಮಾಡಿದ/
ಮಾಡದೆಯಿರುವ ಸ್ಥಿತಿಗಳನ್ನು ಪ್ರಶ್ನಿಸಬೇಕು;
ಹಿತವೆನಿಸಿದ, ಅನಿಸದೇಯಿರುವ ಅಂಶಗಳನ್ನೂ
ಇದ್ದಂತೆ ತಲೆಯಾಡಿಸಿಯೇ ಹೋದರೆ,
ಒಪ್ಪಿಕೊಂಡ ಬಗೆಯೂ ಅಹಿತಕರ
ಎಂದೊಮ್ಮೆಯಾದರೂ ಅನಿಸೇ ಅನಿಸುವುದು…

ಕ್ರಾಂತಿಗಳುಂಟಾಗಿದ್ದು ಇದೇ ಕಾರಣಕ್ಕಾಗಿಯೇ,
ಸ್ವಾತಂತ್ರ್ಯ ಸಿಕ್ಕಿದ ಗಳಿಗೆಯನ್ನು ಮರೆಯಲಾಗುವುದೇ ?
ಅದು ಸಿಕ್ಕಿರುವುದು ನಾಡು-ದೇಶಕ್ಕೆ
ಹೆಮ್ಮಯ ಪರಿಗಣನೆ…

ನನ್ನ ಸ್ವಂತಿಕೆಗೆ ಅದು ಎಂದು ಲಭ್ಯವಾಗಿದೆ ?
-ಅನ್ನುವುದೊಂದೇ ನನ್ನ ಪ್ರಶ್ನೆ;
ಇದು ಸ್ವಾರ್ಥಕರ ಎಂದೆನಿಸಬಹುದು,
ಜೊತೆಗೆ ಎಲ್ಲರ ಹಿತವನ್ನು ಅಪೇಕ್ಷಿಸುವುದು,
ಅದರೊಳಗೆ ನಾ ತೃಪ್ತಿ ಪಡುವುದು,
ಇದೂ ಸಹ ಸ್ವಾರ್ಥದ ಮನೋಭಾವ,
ಆದರೆ ಇದು ದೊಡ್ಡತನ
ಎಂದೇ ಪರಿಗಣಿಸಲಾಗುವುದು…

ದೊಡ್ಡತನ ಸ್ವತಃ ನಮ್ಮದಲ್ಲವೇ ?
ಸ್ವಾರ್ಥದ ಅರ್ಥ ಹುಡುಕುವಲ್ಲೂ
ನಾ ಮತ್ತೊಮ್ಮೆ ಸ್ವಾರ್ಥಿ ಆದೆ
ಹಾಗಾಗಿ ನಾ ಪ್ರಶ್ನಿಸುವುದರಲ್ಲೂ
ಸಾಕಷ್ಟು ತಿಳಿಯಲಾಗದ
ಒಳಾರ್ಥ ಅಡಗಿದೆ ..

ಕೊಂಡುಕೊಂಡವರ ಪಾಲಾದೆವು
ಬಳಸಿಕೊಂಡವರ ದಾಸರಾದೆವು
ಒಮ್ಮೆಯಾದರೂ ಇದನ್ನು ಪ್ರಶ್ನಿಸಿಬೇಕೆನಿಸಲಿಲ್ಲ;
ಈಗ ಅನಿಸಿದರೂ, ಏನೂ ಪ್ರಯೋಜನವಿಲ್ಲ ..!

ಅವುಗಳು ನಮಗೆ ಬದುಕಲು ದಾರಿಮಾಡಿಕೊಟ್ಟಿವೆ;
ಹಾಗಾದರೆ ನಮ್ಮ ಸ್ವಂತ ದಾರಿ ಅಸ್ತಿತ್ವದಲ್ಲೆ ಇರಲಿಲ್ಲವೇ ?
ಇದ್ದರೂ ಸಹ ಹೊರೆಯಷ್ಟು ಕಡಿವಾಣಗಳಿದ್ದವು
ಆದರೂ ಕೆಲ ಕ್ರಾಂತಿಕಾರಿಗಳಿದ್ದರು !

ಇನ್ನು ಕೆಲವರು ಹೊರೆ ಬೇಡವೆಂದು
ಇರುವುದರಲ್ಲೇ ತೃಪ್ತಿ ಪಟ್ಟರು;
ಉಳಿದ ಕೊನೆಯವರು
ಇರುವುದೆಲ್ಲವ ಬಿಟ್ಟು ಹೋರಾಡಲು ಯತ್ನಿಸಿದರು;
ಹೋರಾಟ,
ಇದನ್ನೂ ಸಹ ಏಕೆಂದು ಪ್ರಶ್ನಿಸಬೇಕಲ್ಲವೆ ?

ಉದ್ದೇಶಕ್ಕೆಂದೇ ಜನಿಸಿರುವರು..
ಒಪ್ಪಿಕೊಳ್ಳಲೆಂದೇ ಹುಟ್ಟಿರುವರು,
ದೋಚಲೆಂದೇ ಬದುಕಿರುವರು, ..
ಇವರ ನಡುವೆ ನಾ ಅರಿಯಲೆಂದೇ ಪರಿಪರಿಯಾಗಿ
ಅನ್ವೇಷಣೆ ಮಾಡುತ್ತಲೇ ಇರುವೆ..!

ಉತ್ತರ ಸಿಗಲಿ ಎಂತಲ್ಲ,
ಆದರೆ ಇನ್ನಷ್ಟು ಪ್ರಶ್ನೆಗಳನ್ನು ಹಾಕಿಕೊಳ್ಳುವೆ
ಎಂದು ..
ಯಾವುದಕ್ಕೂ ಉತ್ತರವಿಲ್ಲ,
ಆದರೆ ಸಹ ಉತ್ತರಗಳೇ ಪ್ರಶ್ನೆಯಾದಾಗ.. ?
ನಾ ನನ್ನನ್ನು,
ನಾವು ನಮ್ಮನ್ನು ಕಟ್ಟಿಕೊಳ್ಳುವ ಬಗೆ
ಕೊನೆಗೆ ನಿಲ್ಲದಿಹ ಈ ಉತ್ತರವನ್ನೂ
ಪ್ರಶ್ನೆ ಮಾಡುವ ಬಗೆ…!

-ಅಮೋಘವರ್ಷ ವಿ ಪಾಟೀಲ, ಕ್ಯಾಸನೂರು, ಹಾವೇರಿ ಜಿಲ್ಲೆ
—–