ಅನುದಿನ ಕವನ-೧೪೧೮, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಅಳು-ನಗು

ಅಳು-ನಗು

ಬಾಲಕನಿದ್ದಾಗ
ನಾನೂ ಭೋರಾಡಿ ಅತ್ತಿದ್ದೆ
ಅಂಗಡಿಯಲ್ಲಿನ ಆಟಿಕೆಗಳಿಗಾಗಿ
ಜಾತ್ರೆಗಳಲ್ಲಿನ ಬಲೂನುಗಳಿಗಾಗಿ
ಗೂಡಂಗಡಿಗಳಲ್ಲಿನ
ಪೆಪ್ಪರ್ ಮಿಂಟ್ ಗಳಿಗಾಗಿ
ರಸ್ತೆಯೂ ನಿಬ್ಬೆರಗಾಗಿ
ನೋಡುವಂತೆ ಚೀರಾಡಿದ್ದೆ

ಇದೀಗ……….
ಅದರಂತೆಯೇ ಭೋರಾಡಿ
ಅಳಬೇಕೆನಿಸುತ್ತದೆ
ಬಲೂನಿನ ಗಾಳಿ
ಕರಗಿಹೋದಂತೆ ಹೋದ
ಅಪ್ಪನ ಪ್ರೀತಿಗಾಗಿ
ಕಾಲಗರ್ಭದಲಿ ಸೇರಿದ
ಪೆಪ್ಪರ್ ಮಿಂಟ್ ನಂತಹ ಸಿಹಿಯಾದ
ಅಮ್ಮನ ಮಮತೆಗಾಗಿ
ನಿಡಿದಾಗಿ ಕೊನೆಯೇ ಕಾಣದ
ರಸ್ತೆಯಲಿ ಒಂಟಿಯಾಗಿ
ಸಾಗುವಾಗ ಅನಿಸುತ್ತದೆ
ಕಾಲ ಎಷ್ಟೊಂದು ಕ್ರೂರಿ
ಅಳುವಿನೊಳಗಿನ
ಬಾಲ್ಯವನ್ನು
ಕಸಿದುಬಿಟ್ಟಿತಲ್ಲಾ ಎಂದು
ನೋವುಗಳಿಗೂ
ಜವಾಬ್ದಾರಿಯನ್ನು
ಹೇರಿತಲ್ಲಾ ಎಂದು

ಒಳಗೊಳಗೇ
ಕಾಣದ ದಾರಿಯಲಿ
ಸದ್ದುಗದ್ದಲವಿರದಂತೆ
ಭೋರಾಡಿ ಅಳುತ್ತೇನೆ
ಕಂಡವರೆದುರು
ತುಟಿಗಳ ಮೇಲೆ
ನಗೆಯ ಚಿಹ್ನೆಯನ್ನು
ಮಾತ್ರ ಸದಾ
ಧರಿಸಿರುತ್ತೇನೆ


-ಸಿದ್ಧರಾಮ ಕೂಡ್ಲಿಗಿ
—-