ಅನುದಿನ ಕವನ-೧೪೨೧, ಕವಿ: ಅಸದ್(ಜಬೀವುಲ್ಲಾ ಅಸದ್), ಬೆಂಗಳೂರು, ಕವನದ ಶೀರ್ಷಿಕೆ: ಕ್ಷಮಿಸಿ ಇದು ಕವಿತೆಯಲ್ಲ!

ಕ್ಷಮಿಸಿ ಇದು ಕವಿತೆಯಲ್ಲ!

ಅಲ್ಲಿ ನೋಡಿ
ಅವರದೇ ವೇದಿಕೆ
ಮಾತು, ಕಥೆ, ಕವಿತೆ
ಗೋಷ್ಠಿ ಎಲ್ಲವೂ
ಮಾನವೀಯತೆ, ಪ್ರಜಾಪ್ರಭುತ್ವ
ಸಮಾನತೆ
ಎಂದೆಲ್ಲ ಬೊಬ್ಬಿಡುತ್ತಾರೆ
ಎಲ್ಲಾ ಕೇವಲ ದಿಖಾವ ಅಷ್ಟೇ
ಬಿಡಿ, ಅವರೇ ಇರುತ್ತಾರೆ

ಈಗ ಎಲ್ಲೆಡೆಯೂ
ನಾವು, ನಮ್ಮವರು
ನಮಗೆ ಬೇಕಾದವರಷ್ಟೇ
ಬರೀ ಗುಂಪುಗಾರಿಕೆ
ಪುಂಗುವವರೆ; ಅರೆ…
ನಿಜ ಹೇಳಬೇಕೆಂದರೆ
ಅವರವರ ಭದ್ರ ಕೋಟೆ
ರಾಜಕೀಯದವರಂತೆ

ಹೊರಗಿನವರು ಒಳ ನುಸುಳುವಂತಿಲ್ಲ
ಒಳಗಿರುವವರು ಅವಕಾಶವಾದಿಗಳಲ್ಲ
ಅನ್ನುವಂತಿಲ್ಲ!
ಆಹ್ವಾನಿತರಿಗಷ್ಟೆ ತೆರೆದ ಬಾಗಿಲು
ಪ್ರತಿಷ್ಠಿತ, ಪ್ರಶಸ್ತಿತರಿಗಷ್ಟೇ ರೆಡ್ ಕಾರ್ಪೆಟು
ಸರ್ಟಿಫಿಕೇಟ್ ಮತ್ತು ಮೆಡೆಲು

ಅವರದೇ ನೀತಿ, ನಿಯಮ, ವಿಚಿತ್ರ ಸುತ್ತೋಲೆಗಳು
ಅಡಕಸಬಿ ಶಿಫಾರಸ್ಸುಗಳು
ಮೀಟಿಂಗ್, ಒಟಿಂಗ್ ಗಳು
ವರುಷಗಳು ಉರುಳಿದರು
ಅವೇ ಮುಖಗಳು, ಅರ್ಥವಾಗದ ಕವಿತೆಗಳು
ನಿರ್ಜಿವ ಸಿದ್ಧಾಂತಗಳು, ಅವಿವೇಕದ ಇಸಂಗಳು
ಕುರುಡಾಗಿ ಮೆಚ್ಚಿದವರ ಕಿವಿ
ಕಚ್ಚುವ ಕರತಾಳಗಳು
ಆಹಾ…! ಓಹೋ…!
ವಂದಿಮಾಗಧರು
ಸಾಹಿತ್ಯ ಲೋಕದ ಎಲ್ಲೆಡೆಯೂ

-ಅಸದ್(ಜಬೀವುಲ್ಲಾ ಅಸದ್), ಬೆಂಗಳೂರು
——