” ನನ್ನಿರುವಿಕೆ ನಾ ಮರೆತ ಸಮಯ.!”
ನಾ ಹಾಡಾಗುತ್ತೇನೆ..
ನೀ ನನ್ನ ಒಲವ ಹಾಡಿಗೆ
ಪ್ರೀತಿಯ ಪಲ್ಲವಿಯಾದಾಗಲೆಲ್ಲ.!
ನಾ ನವಿಲಾಗುತ್ತೇನೆ…
ನೀ ನನ್ನ ಮನದಿ ಕಲ್ಪನೆಯ
ಕನಸಿನ ಕಣ್ಣಾದಾಗಲೆಲ್ಲ.!
ನಾ ಕೋಗಿಲೆಯಾಗುತ್ತೇನೆ…
ನೀ ಮಾಮರದ ಚಿಗುರಂತೆ ನಲ್ಮೆ
ನೀಡಿದಾಗಲೆಲ್ಲ.!
ನಾ ಜಿಂಕೆಯಾಗುತ್ತೇನೆ..
ನೀ ನಿನ್ನಾಗಮನದ
ಸುಳಿವು ನೀಡಿದಾಗಲೆಲ್ಲ.!
ನಾ ನದಿಯಾಗುತ್ತೇನೆ..
ನೀ ಕಡಲಂತೆ
ಅಗಾಧವಾದಂತೆಲ್ಲ.!
ನಾ ಕಡಲಲೆಯಾಗುತ್ತೇನೆ..
ನೀ ಬೆಳದಿಂಗಳ ಚಂದ್ರನಂತೆ..
ಕಣ್ಣೋಟದ ಕಾಂತಿ ಬೀರಿದಾಗಲೆಲ್ಲ.!
ನಾ ದೀಪದಂತೆ ಪ್ರಾಂಜಲವಾಗುತ್ತೇನೆ
ನೀ ಮಮತೆಯ ತೈಲದಂತೆ
ನನ್ನೊಲವ ಬತ್ತಿಯಲಿ ಬೆರೆತಾಗಲೆಲ್ಲ.!
ನಾ ಹೂವಾಗಿ ಅರಳುತ್ತೇನೆ..
ನೀ ದುಂಬಿಯಂತೆ
ನನ್ನ ಸುತ್ತಮುತ್ತ ಸುಳಿವಾಗಲೆಲ್ಲ.!
ನಾ ಕವಿತೆಯಾಗುತ್ತೇನೆ..
ನೀ ನನ್ನ ಭಾವಗಳೊಂದಿಗೆ ನಿನ್ನ ಭಾವಗಳ ಮೇಳೈಸಿದಾಗಲೆಲ್ಲ.!
ಇಂತಿ ನಿನ್ನ ಪ್ರೀತಿ.
-ಶಾಂತಾ ಪಾಟೀಲ್, ಸಿಂಧನೂರು