ಅನುದಿನ ಕವನ-೧೪೨೩, ಕವಯಿತ್ರಿ: ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ:ರೊಟ್ಟಿಯಾಗರಳಿ

ರೊಟ್ಟಿಯಾಗರಳಿ

ಕುದಿವೆಸರಲಿ
ಮಿಜ್ಜಿ ಮಿಜ್ಜಿ ನಾದಿ
ಹದಗೊಂಡ ಹಿಟ್ಟವಳು.

ಬಿಗಿ ಪಟ್ಟಿನ ತಾಳಕೆ
ಹಿಗ್ಗಿ ಹಿಗ್ಗಿ  ಗುಂಡಗೆ
ರೊಟ್ಟಿಯಾದವಳು.

ಕಾದ್ಹೆಂಚಲಿ ಮಗ್ಗಲಾಗಿ
ಮೈ ಸುಟ್ಟುಕೊಂಡವಳು.

ಮಕ್ಕಳ ಹಿಡಿಗೆ ಮುಟಿಗಿಯಾಗಿ
ಕರುಳ ಹಸಿವ ನೀಗಿದವಳು

ತರಹೆವಾರಿ ಪದಾರ್ಥಗಳೊಡಗೂಡಿ
ಒಡಲ್ಹಸಿವಿಗೆ ಆಹಾರವಾದವಳು

ಕಣ್ಣಿನೊಲೆಯಲ್ಲಿ ನಿಗಿ ಕೆಂಡ ತುಂಬಿ
ಬೆವರ ಮುತ್ತುಗಳ ಹೊಳೆಸಿ
ತಾನೇ ರೊಟ್ಟಿಯಾಗರಳಿದವಳು.


-ಭಾರತಿ ಅಶೋಕ್, ಹೊಸಪೇಟೆ
—–