ಬಳ್ಳಾರಿ,ನ.29: ಶ್ರೀಮಂತ ಸಂಸ್ಕೃತಿ, ಮನಸೂರೆಗೊಳ್ಳುವ ಕಲೆ, ಭೌಗೋಳಿಕ ವಿಶೇಷತೆ ಹಾಗೂ ವೈವಿಧ್ಯತೆಯಿಂದ ಕೂಡಿದ ಕನ್ನಡ ನಾಡಿನಲ್ಲಿ ಜನಿಸುವುದೇ ಪುಣ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್.ಎಂ ಅವರು ಹೇಳಿದರು.
ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸುವರ್ಣ ಕರ್ನಾಟಕ ಸಂಭ್ರಮ-ಕರ್ನಾಟಕ ರಾಜ್ಯೋತ್ಸವ-69 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ಪ್ರದೇಶಗಳಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗದಲ್ಲಿ ಪ್ರಾದೇಶಿಕವಾರು ಮಾತನಾಡುವ ಭಾಷೆ ಶೈಲಿ, ಆಚಾರ-ವಿಚಾರ, ಉಡುಗೆ-ತೊಡುಗೆ ಬದಲಾವಣೆಗೊಳ್ಳುತ್ತದೆ. ಎಲ್ಲೇ ಇದ್ದರೂ ನಾವಾಡೋ ಮಾತು, ಉಸಿರಾಡೋ ಗಾಳಿ, ನಮ್ಮ ನಡೆ-ನುಡಿಯಲ್ಲೂ ಕನ್ನಡತವನ್ನು ಮೈಗೂಡಿಸಿಕೊಂಡು ವೈವಿಧ್ಯತೆಯಲ್ಲೂ ಏಕತೆಯನ್ನು ಎತ್ತಿಹಿಡಿಯಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಉದಯಗೊಂಡು 69 ವರ್ಷ ಕಳೆಯಿತು. ಈ ಮೊದಲು ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿದ್ದ ರಾಜ್ಯವನ್ನು 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣಗೊಳಿಸಿದ 50 ವರ್ಷದ ಸಂಭ್ರಮದಲ್ಲಿ ನಾವಿದ್ದೇವೆ ಎಂದರು.
ಕನ್ನಡ ನಾಡಿನ ಜನರು ಇತರೆ ಭಾಗಗಳಿಗೆ ಹೋದರೂ ಕನ್ನಡವನ್ನು ಸಂಭ್ರಮಿಸುವ ಗುಣ ಹೊಂದಿದ್ದಾರೆ. ಐತಿಹಾಸಿಕ ಹಿನ್ನೆಲೆ ಹೊಂದಿದ ಕನ್ನಡ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಬೆಳೆಸುವಲ್ಲಿ ಕನ್ನಡಾಭಿಮಾನಿಗಳು ಶ್ರಮಿಸಬೇಕು ಎಂದು ಹೇಳಿದರು.
ನಾಡಿನ ಹಿರಿಯ ಸಾಹಿತಿ ಡಾ. ಕುಂ.ವೀರಭದ್ರಪ್ಪ ಅವರು ಮಾತನಾಡಿ, ಕನ್ನಡ ಭಾಷೆಗೆ ಅವಿರತ ಇತಿಹಾಸವಿದೆ. ಅನೇಕ ಶಾಸನ, ಸಾಹಿತ್ಯ, ವಚನ, ಕೃತಿ, ಲೇಖನಗಳನ್ನು ಕೊಡುಗೆ ನೀಡುವಲ್ಲಿ ಕನ್ನಡ ಮೇರುಸ್ಥಾನ ಹೊಂದಿದ್ದು, ಕನ್ನಡದ ಇತಿಹಾಸವನ್ನು ಅರಿತು ಗೌರವಿಸಬೇಕು ಎಂದು ತಿಳಿಸಿದರು.
ವೈವಿಧ್ಯಮಯ ನಾಡು, ಸರ್ವ ಜನಾಂಗದ ಶಾಂತಿಯ ತೋಟವಾದ ಕನ್ನಡ ನಾಡಿನಲ್ಲಿ ಜಾತಿ-ಧರ್ಮದ ಎಲ್ಲೆ ಮೀರಿ ಜೀವಿಸಲಾಗುತ್ತಿದೆ ಎಂದರು.
ಕನ್ನಡವನ್ನು ಕಟ್ಟಿ ಬೆಳೆಸಲು ಶ್ರಮಿಸಿದ ಆದಿಕವಿ ಪಂಪ, ಕುಮಾರವ್ಯಾಸ, ಬಸವಣ್ಣ, ಅಲ್ಲಮಪ್ರಭು, ಪುರಂದರ ದಾಸ, ಕನಕದಾಸ, ಕುವೆಂಪು, ದ.ರಾ.ಬೇಂದ್ರೆ, ಸೇರಿದಂತೆ ಕನ್ನಡ ಭಾಷೆ-ಸಾಹಿತ್ಯ ಏಳಿಗೆಗೆ ಕೊಡುಗೆ ನೀಡಿದ ಅನೇಕ ಮಹನೀಯರನ್ನು ಸ್ಮರಿಸಬೇಕಿರುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಎಂದು ಹೇಳಿದರು.
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ಪ್ರತಿ ವಿದ್ಯಾರ್ಥಿಯು ಸಂಸ್ಕಾರ ಹೊಂದಿರುತ್ತಾರೆ. ವಿವಿಯಲ್ಲಿ ಶೀಘ್ರವೇ ಕನ್ನಡ ಅಧ್ಯಯನ ವಿಭಾಗಕ್ಕೆ ಪೂರ್ಣಕಾಲಿಕ ಅಧ್ಯಾಪಕರುಗಳ ನೇಮಕಕ್ಕೆ ಮುತುವರ್ಜಿ ವಹಿಸಬೇಕು ಎಂದು ಕುಂವೀ ಒತ್ತಾಯಿಸಿದರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ವಿಜಯನಗರ ಸಾಮ್ರಾಜ್ಯ ಉದಯಿಸಿರುವ ಈ ಭಾಗ ಪವಿತ್ರ ಭೂಮಿಯಾಗಿದ್ದು, ಕಲೆ, ಸಾಹಿತ್ಯ, ಸಮಾಜಕ್ಕೆ ಅಪಾರ ಕೊಡುಗೆ ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ಯುವ ಪೀಳಿಗೆಯು ಹೆಚ್ಚಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ತಪ್ಪು ಪ್ರಯೋಗವಾದಲ್ಲಿ ಧ್ವನಿ ಎತ್ತುವ ಕೆಲಸ ನಿರ್ವಹಿಸಿ, ಕನ್ನಡ ಭಾಷೆ-ಸಾಹಿತ್ಯ ಬಲಿಷ್ಠಗೊಳಿಸುವ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕನ್ನಡ ಭಾಷೆ, ಸಾಹಿತ್ಯ, ಜಾನಪದ ಸೊಗಡಿನ ಕುರಿತು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಕನ್ನಡ ಕೀಳರಿಮೆ ಭಾವನೆ ತ್ಯಜಿಸಿ ಸಮ ಸಮಾಜದ ಚಿಂತನೆ ಬೆಳೆಸಿಕೊಂಡು, ಕನ್ನಡತನವನ್ನು ಉಳಿಸಿ-ಬೆಳೆಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಗಣ್ಯರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಂಗೀತಾ ತಂಡದ ಗೀತೆಗಳು ಕನ್ನಡಾಭಿಮಾನಿಗಳಿಗೆ ಇಂಪು ನೀಡಿತು.
ಸಂಭ್ರಮ-ಸಡಗರದ ಮೆರವಣಿಗೆ: ಸುವರ್ಣ ಕರ್ನಾಟಕ ಸಂಭ್ರಮ, ಕರ್ನಾಟಕ ರಾಜ್ಯೋತ್ಸವ-69 ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಅದ್ದೂರಿ ಮೆರವಣಿಗೆಯು ತಾಯಿ ಭುವನೇಶ್ವರಿಯ ರಥದೊಂದಿಗೆ ಕುಂಭ ಹೊತ್ತ ಮಹಿಳೆಯ ಸಮ್ಮುಖದಲ್ಲಿ ವಿವಿಧ ಕಲಾತಂಡಗಳ ವಾದ್ಯಗಳ ಮೂಲಕ ರಾಜ್ಯದ 31 ಜಿಲ್ಲೆಗಳ ಸಂಸ್ಕೃತಿ, ವಿಶೇಷತೆ ಒಳಗೊಂಡ ಮಾಹಿತಿ ಕೈಪಿಡಿಯ ಚಿತ್ರಣ ಹಿಡಿದು, ಬುಲೆಟ್ ಬೈಕ್ಗಳ ಕಲರವದಿಂದ ವಿವಿಯ ಆವರಣದಲ್ಲಿ ಸಾಗಿಬಂದ ಮೆರವಣಿಗೆಯು ಸಂಭ್ರಮ-ಸಡಗರಕ್ಕೆ ಸಾಕ್ಷಿಯಾಯಿತು. ವಿವಿಧ ಕಲಾ ತಂಡಗಳಿಂದ ಜಾನಪದ ಕಲೆಗಳ ಪ್ರದರ್ಶನಕ್ಕೆ ಮೆರವಣಿಗೆಯು ಮೆರಗು ತಂದಿತು.
ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು, ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ, ಬಳ್ಳಾರಿಯ ಲೋಹಿಯಾ ಪ್ರಕಾಶನದ ಪ್ರಕಾಶಕ ಸಿ.ಚನ್ನಬಸವಣ್ಣ, ಕುಲಸಚಿವ ಎಸ್.ಎನ್ ರುದ್ರೇಶ್, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್ ಓಲೇಕಾರ್, ಹಣಕಾಸು ಅಧಿಕಾರಿ ನಾಗರಾಜ, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ರಾಬರ್ಟ್ ಜೋಸ್, ಸಿಂಡಿಕೇಟ್ ಸದಸ್ಯರಾದ ಪೀರ್ ಬಾಷಾ, ಶಿವಕುಮಾರ್ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿಭಾಗದ ಮುಖ್ಯಸ್ಥರು, ಸಂಯೋಜಕರು, ಬೋಧಕ-ಬೋಧಕೇತರ ವರ್ಗ, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
———–