ಸಾವು ಅಂದ್ರೆ ಸಾವು ಅಷ್ಟೇ !
ಯಾಕೋ ಸಮಯದ ಜೊತೆ ಬಲು ಸ್ನೇಹ ಈಗ
ಕೆಲಸ ಇಲ್ಲ ಬೊಗಸೆ ಇಲ್ಲ ಎಲ್ಲ ಖಾಲಿ ಖಾಲಿ
ಹೂಬೇಹೂಬ ಸಮಯದಂತೆ ಖಾಲಿ ನೋಟ
ಕುರುಡು ಕಣ್ಣು ಕಿವುಡು ಕಿವಿ ಮಾತಲ್ಲೂ ಮೌನ
ಸಮಯದ ಕೈಗೆ ಕೈ ಜೋಡಿಸಿ ನಡೆವುದು ಅಷ್ಟೇ!
ಬಹುಶಃ ಸಮಯದ ಮನವೂ ತುಂಬಿ ಭಾರ ಸುರಿಯದ ಕಾರ್ಮುಗಿಲು! ಉಸಿರದ ಮನಸು !
ಏನೋ ಘನ ಕಾರ್ಯದಡಿ ಸಿಲುಕಿ ನರಳಿ ನಲುಗಿ
ಹುಸಿ ಗಾಂಭೀರ್ಯ ತೋರಿ ಹೆಜ್ಜೆ ಸರಿಸಿದಾಗ
ಬಲು ಆಪ್ತವೀ ಸಮಯ ಚೂರೂ ಸಂದೇಹವೆ ಇಲ್ಲ!
ಮತ್ತೆ ಆ ಕೆಲಸ ಸಾಧ್ಯವೆ ಇನ್ನಾರಿಗೆ ಹೇಳು
ಅಲೆಯಂತೆ ತೇಲಿ ನೆಲೆಯಿಲ್ಲದ ತಾವಲ್ಲಿ ನೆಲೆ
ಸಿಕ್ಕಿದಂತೆ ಭ್ರಮೆ ಹುಟ್ಟಿಸಿ ಜೀವಕೆ ಅಂಟಿಸಿ ಬಿಟ್ಟ
ಬಲು ಅಮೂಲ್ಯ ಬದುಕು ಎಂಬ ನಂಬಿಕೆಯ!
ಆ ಗಡಸುಗಾರ ಸಮಯ ಬಲು ಮೆಚ್ಚು ನನಗೆ!
ಇಷ್ಟಾಗಿಯೂ ಆ ಬದುಕಾದರೂ ಏನು ಮಹಾ
ಆಕಸ್ಮಿಕ ಅಚ್ಚರಿ ದಿಗ್ಘ್ಮೂಢತೆಗಳ ಒಟ್ಟು ಮೊತ್ತ
ನೋವು ನಲಿವು ಸುಖ ದು:ಖ ಎಲ್ಲ ಹಸಿಸುಳ್ಳು
ಬರಡು ಬಯಲು ಅಲ್ಲುಂಟು ಹಸಿರೆಂಬ ಭ್ರಾಂತಿ
ಜಾದೂಗಾರ ಸಮಯದ ಮೋಡಿಗೆ ಮರುಳು ನಾ!
ಅದೇ ಮರುಳಿನ ನೆರಳಲಿ ಓಡಿಸಿ ಆಡಿಸಿ ಜಾರಿಸಿ ಜಾಲಗಾರನ ಮೀರಿ ಪಟ್ಟಾಗಿ ಸಿಗಿಸಿ ಜಾಲದಲ್ಲಿ ಕೊನೆಗೆ ಸಹನೆ ತಪ್ಪಿಸಿ,ವಿರಾಮಕೆ ಹಾತೊರೆಯೆ ಜೀವ
ದೊಡ್ಡದಾಗಿ ಕೈ ಚಾಚಿ ಬಾ ಒಯ್ವೆ ಅಲ್ಲಿದೆ ಶಾಂತಿ ತಿರುಗಿ ಬಾರದಲ್ಲಿ
ಬರಿ ದೊಡ್ಡ ಮಾತು ಸಮಯದ್ದು!ಸಾವು ಅಂದ್ರೆ ಸಾವು ಅಷ್ಟೇ ಇನ್ನೇನಿದೆ !
ಆ ಉಪಾಯಗಾರ ಸಮಯ ನನಗೆ ಬಲು ಇಷ್ಟ!
-ಸರೋಜಿನಿ ಪಡಸಲಗಿ
ಬೆಂಗಳೂರು
ರೌದ್ರವಿದ್ದರೂ ಒಂದು ತರದ ಸೌಂದರ್ಯವಿದೆ ಈ ಕವಿತೆಯಲ್ಲಿ! ಕವಿಯ ಮನದಲ್ಲಿ ಇಂಥ ಭಾವಗಳನ್ನೆಬ್ಬಿಸಬೇಕಾದರೆ ಅದೆಷ್ಟು ನೊಂದರಬೇಡ, ಅದು ಊಹಾತೀತ. ಅವುಗಳನ್ನು ಅಕ್ಷರಗಳಲ್ಲಿ ಯಾ ಕವಿತೆಯಲ್ಲಿ ಅಭಿವ್ಯಕ್ತಿಗೊಳಿಸಲೂ ಶಕ್ತಿ ಬೇಕು ಎಂದು ನನ್ನ ಎಣಿಕೆ. ಅದಕ್ಕೇ ಕವಯಿತ್ರಿಯನ್ನು ಅಭಿನಂದಿಸಬೇಕೋ ಸಾಂತ್ವನಪರ ಮಾತುಗಳನ್ನಾಡಬೇಕೋ ತಿಳಿಯದಾಗಿದೆ. ಭಾಷೆಯ ಮೇಲಿನ ಹಿಡಿತವನ್ನಂತೂ ಮೆಚ್ಚಿದೆ!