ಅನುದಿನ‌ ಕವನ-೧೪೩೫, ಹಿರಿಯ ಕವಿ: ತಮ್ಮಣ್ಣ ಬೀಗಾರ, ಸಿದ್ಧಾಪುರ, ಉತ್ತರ ಕನ್ನಡ, ಕವನದ ಶೀರ್ಷಿಕೆ: ಓಗುಡುತ್ತಿತ್ತು…

ಓಗುಡುತ್ತಿತ್ತು

ಮಣ್ಣಿನ ಒಳಗೆ ಮಗುವೊಂದಿತ್ತು
ಪುಳು ಪುಳು ನೀರಿಗೆ ಚಿಗುರೊಡೆದಿತ್ತು

ಮರದ ಒಳಗೆ ಮಗುವೊಂದಿತ್ತು
ಹಣ್ಣನು ತಿನ್ನದೇ ಕೊಡು ಕೊಡುತ್ತಿತ್ತು

ಮೋಡದ ಒಳಗೂ ಮಗುವೊಂದಿತ್ತು
ಹನಿ ಹನಿ ನೀರನು ಚಿಮುಕಿಸುತ್ತಿತ್ತು

ಎಳೆ ತೆನೆ ಕಾಳಲಿ ಮಗುವೊಂದಿತ್ತು
ಹಾಲನು ಕುಡಿಯದೆ ನಮಗಿಡುತ್ತಿತ್ತು

ಚಂದ್ರನ ಒಳಗೂ ಮಗುವಂದಿತ್ತು
ತಾನೇ ನಗುತಲಿ ಖುಷಿಪಡುತ್ತಿತ್ತು

ಹಕ್ಕಿಯ ಹಾಡಲಿ ಮಗುವೊಂದಿತ್ತು
ಮರಿಗಳ ಸಂಗಡ ಲೊಚಗುಡುತ್ತಿತ್ತು

ಎಲ್ಲರ ಹೃದಯದಿ ಮಗುವೊಂದಿತ್ತು
ಮಕ್ಕಳ ಪ್ರೀತಿಗೆ ಓಗುಡುತಿತ್ತು

-ತಮ್ಮಣ್ಣ ಬೀಗಾರ, ಸಿದ್ಧಾಪುರ, ಉತ್ತರ ಕನ್ನಡ