ಬಳ್ಳಾರಿ,ಡಿ.20: ಪುಸ್ತಕಗಳು ಮನುಷ್ಯನ ಜ್ಞಾನ ವೃದ್ಧಿ ಮಾತ್ರವಲ್ಲದೆ, ಭೌತಿಕ ಬೆಳವಣಿಗೆ ಹೊಂದಲು ಸಹಕಾರಿಯಾಗುತ್ತವೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗ ಪ್ರೊ.ಎಂ ಮುನಿರಾಜು ಅವರು ಹೇಳಿದರು.
ನಗರದ ಸರಳಾದೇವಿ ಸತೀಶ್ಚಂದ್ರ ಅಗರ್‌ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ನಾತಕ ಪದವಿಯ ಪಠ್ಯದ ಭಾಗವಾದ ವಾಣಿಜ್ಯ ಸೌರಭ, ವಿಜ್ಞಾನ ಸೌರಭ ಮತ್ತು ಕಲಾ ಸೌರಭ ಎಂಬ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ಗೀಳನ್ನು ಬಿಟ್ಟು ಯುವಜನತೆ ಪುಸ್ತಕಗಳನ್ನು ಖರೀದಿಸಿ ಓದಬೇಕು ಆಗ ಮಾತ್ರ ಪುಸ್ತಕ ಪ್ರೀತಿ ಇಮ್ಮಡಿಗೊಳ್ಳುತ್ತದೆ ಎಂದು ತಿಳಿಸಿದರು.
ವಿವಿಯ ಕಲಾ ನಿಕಾಯದ ಡೀನರಾದ ಪ್ರೊ.ಶಾಂತನಾಯ್ಕ್ ಅವರು ಮಾತನಾಡಿ, ಮೌಲ್ಯಯುತ ಪುಸ್ತಕಗಳು ವಿದ್ಯಾರ್ಥಿಯ ಜೀವನವನ್ನು ಬದಲಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಎಲ್ಲ ಭಾಷೆಯ ಪುಸ್ತಕಗಳನ್ನು ಓದಿರಿ, ಆದರೆ ಕನ್ನಡ ಪುಸ್ತಕಗಳನ್ನು ಪ್ರೀತಿಸಿರಿ ಎಂದು ಹೇಳಿದರು.
ವಿವಿಯ ಪ್ರಸಾರಾಂಗ ನಿರ್ದೇಶಕ ಪ್ರೊ.ಅರುಣ್ ಕುಮಾರ್ ಲಗಶೆಟ್ಟಿ ಅವರು ಮಾತನಾಡಿ, ಪ್ರಸಾರಾಂಗದಿಂದ ಪ್ರಕಟಗೊಂಡಿರುವ ಬಳ್ಳಾರಿ ದರ್ಶನ ಪುಸ್ತಕವು ಹೆಚ್ಚು ಬೇಡಿಕೆಯಲ್ಲಿದ್ದು, ಪಠ್ಯಕ್ರಮದ ಪುಸ್ತಕಗಳನ್ನು ಹೆಚ್ಚಾಗಿ ಪ್ರಕಟಿಸಲು ಮುಂಬರುವ ದಿನಗಳಲ್ಲಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪುಸ್ತಕದ ಸಂಪಾದಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಎಸ್‌ಎ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಮೋನಿಕಾ ರಂಜನ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಲಿ, ಸಾಹಿತಿಗಳಾದ ಡಾ.ನಾಗಣ್ಣ ಕಿಲಾರಿ, ಡಾ. ಶ್ಯಾಮೂರ್ತಿ, ಡಾ. ಬಿ ಜಿ. ಕಲಾವತಿ, ಡಾ.ಸೋಮಶೇಖರ್, ಡಾ.ಗಾದೆಪ್ಪ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
—–