ಅನುದಿನ ಕವನ-೧೪೫೫, ಕವಿ: ವಿಲ್ಸನ್ ಕಟೀಲ್, ದಕ್ಷಿಣ ಕನ್ನಡ. ಕವನದ ಶೀರ್ಷಿಕೆ: ಮುತ್ತಿದ ಸಾಲುಗಳು

ಮುತ್ತಿದ ಸಾಲುಗಳು


ನಿನ್ನ ಬತ್ತಲೆ ಬೆನ್ನ ಮೇಲೆ
ನನ್ನ ತುಟಿಗಳು
ಏನನ್ನೋ ಹುಡುಕುತ್ತಿದ್ದವು…

ಅಷ್ಟರಲ್ಲಿ
ನೀನು ಮಗ್ಗುಲು ಬದಲಾಯಿಸಿದೆ…

ಈಗ
ನಾನು
ನನ್ನ
ತುಟಿಗಳನ್ನು ಹುಡುಕುತ್ತಿದ್ದೇನೆ…..

ನಿನ್ನ ಬೆವರಿನ ಉಪ್ಪಲ್ಲಿ
ನನ್ನ ತುಟಿಗಳನ್ನು
ನೆನೆ ಹಾಕಿದ್ದೇನೆ…

ಇನ್ನು ಮುಂದೆ
ನನ್ನ ಮುತ್ತುಗಳು
ಕೊಳೆತು ಹೋಗಲಾರವು…

ನಿನ್ನ ಕಿಬ್ಬೊಟ್ಟೆಯ ಇಳಿಜಾರಿನಲ್ಲಿ
ನಾನು ಮುತ್ತುಗಳನ್ನು ಚೆಲ್ಲಿದ್ದೇನೆ..

ಕೈಗಳಿಗೆ ಸಿಗದ ನಿಧಿ ಅದು
ತುಟಿಗಳಿಂದಲೇ ಹೆಕ್ಕಬೇಕು!

ಕರಾಳ ಕತ್ತಲು
ಯಾರೂ ಮೋಂಬತ್ತಿ ಹೊತ್ತಿಸಬೇಡಿ…

ನನ್ನ ತುಟಿಗಂಟಿದ
ಸಿಗರೇಟಿನ ಬೆಂಕಿ ಸಾಕು
ಅವಳ ಮುತ್ತುಗಳನ್ನು ಹುಡುಕಲು

ಗೋಡೆಗಳು ಉರುಳಿದ
ಒಂದು ರಾತ್ರಿ
ನಿನ್ನ ಮಡಿಲಲ್ಲಿ ಮಲಗಿ
ಆಕಾಶ ನೋಡಬೇಕು..

ನಕ್ಷತ್ರಗಳ ಜೊತೆ
ಮೊಲೆತೊಟ್ಟುಗಳನ್ನೂ ಎಣಿಸಬೇಕು….


-ವಿಲ್ಸನ್ ಕಟೀಲ್, ದಕ್ಷಿಣ ಕನ್ನಡ

[ರೇಖಾ ಚಿತ್ರ: ಝಬೀವುಲ್ಲಾ‌ಎಂ ಅಸಾದ್]