ಅನುದಿನ ಕವನ-೧೪೭೦, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು

1
ಅವಳು ಹಾಡುವುದನ್ನು ನಿಲ್ಲಿಸಿದಳು
ಗಂಟಲು ಕಟ್ಟಿಯೇ ಹೋಯಿತು
ಅವಳು ನರ್ತಿಸುವುದನ್ನು ನಿಲ್ಲಿಸಿದಳು
ಕಾಲು ಜಡಗೊಂಡಿತು
ಅವಳು ಬರೆಯುವುದನ್ನು ನಿಲ್ಲಿಸಿದಳು
ಪದಗಳು ಪೆನ್ನಿನಲ್ಲಿ ಸಿಕ್ಕಿಕೊಂಡವು
ಅವಳು ತನ್ನ ನುಡಿಯನ್ನೇ ಮರೆತಳು
ಮಾತುಗಳು ಎಲ್ಲೋ ಹೂತು ಹೋದವು
ವೀಣೆ ನುಡಿಸುವುದನ್ನು ನಿಲ್ಲಿಸಿದಳು
ತುಕ್ಕು ಹಿಡಿದಿದ್ದು ತಂತಿಗೋ, ಬೆರಳಿಗೋ ?!


ಆದರೆ
ನದಿ ಹರಿಯುತ್ತಲೇ ಇರುತ್ತದೆ
ಕಡಲ ಒಡಲು ಭೋರ್ಗರೆಯುತ್ತಲೇ ಇದೆ
ಹಕ್ಕಿಗಳು ಹಾಡುವುದನ್ನು ನಿಲ್ಲಿಸಲೇ ಇಲ್ಲ
ನವಿಲು ಕುಣಿಯುವುದನ್ನು ಬಿಡಲಿಲ್ಲ
ತಾರೆಗಳು ಹೊಳೆಯುತ್ತವೆ
ಮರಗಳು ವಯಸ್ಸನ್ನು ಮರೆತು ಚಿಗುರುತ್ತವೆ
ಬದುಕಿರುವವರೆಗೂ ಎಲ್ಲವೂ ಜೀವಂತ!


ಈಗವಳು ಹಾಡುತ್ತಾಳೆ, ಕುಣಿಯುತ್ತಾಳೆ
ಬರೆಯುತ್ತಾಳೆ, ಮಾತನಾಡುತ್ತಲೇ ಇರುತ್ತಾಳೆ
ಬದುಕಿರುವವರೆಗೂ ಎಲ್ಲವೂ ಜೀವಂತ!
ಸಂಸಾರ, ಮಕ್ಕಳು, ಕುಟುಂಬ, ಸಮಾಜದ
ನೆಪದಲ್ಲಿ ಸತ್ತಂತಿದ್ದವಳೀಗ ಜೀವಂತ!

-ಎಂ ಆರ್ ಕಮಲ, ಬೆಂಗಳೂರು
—–