ಅನುದಿನ ಕವನ-೧೪೭೪, ಹಿರಿಯ ಕವಿ:ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ:ನನ್ನ ಕವಿತೆಗೊಂದು ಶೀರ್ಷಿಕೆ ಕೊಡುವಿರಾ?

ನನ್ನ ಕವಿತೆಗೊಂದು ಶೀರ್ಷಿಕೆ ಕೊಡುವಿರಾ?

ಅವಳ ಮುಗುಳ್ನಗೆ
ನನ್ನ ಬದುಕಿಗೆ ಬರೆದ ಮುನ್ನುಡಿಯಂತಿತ್ತು.

ಅಲ್ಲಿ ನಾನಿದ್ದೆ, ಅವಳಿದ್ದಳು
ಪದ್ಯ ಇತ್ತು, ರಸ್ತೆ ಬದಿಯ ಮರಗಳಿದಗದ್ದವು, ನೀವೂ
ಇದ್ದಿರಿ…

ಈಗ ಅವಳ ಹುಬ್ಬು
ಗಂಟಿಕ್ಕಿವೆ. ಹೂದಾನಿಯಲ್ಲಿನ ಹೂವಿನ-
ಹಾಗೆ, ಸಾಯುತ್ತಿದೆ ಪ್ರೀತಿ
ಉಸಿರುಕಟ್ಟಿ.

ಇದೆಲ್ಲ ಕಟ್ಟು ಕಥೆಯ
ಹಾಗೆ ಕಂಡರೆ, ಕ್ಷಮೆಯಿರಲಿ. ವಾಸ್ತವದ ಬದುಕು ಕಲ್ಪನೆಯ
ಕೂಸಲ್ಲ.

ಅವಳ ಕೆನ್ನೆ ಮೇಲಿನ
ಮೊಡವೆಯ ಚೆಲುವಿನ ಹಾಗೆ ಅಲ್ಲವೇ ಅಲ್ಲ.

ನಿಮಗೂ ಗೊತ್ತು;

ಕಿಟಕಿ ಪರದೆಗಳ ಹಿಂದಿರುವ
ಬದುಕು; ಮರಗಳ ಕೆಳಗೆ ನಡೆದ ಹಾಗೆ
ಅಲ್ಲವೇ ಅಲ್ಲ.

ರಾತ್ರಿ ಉರಿದ
ಮೋಂಬತ್ತಿಗಳು ಕರಗಿ ಕಾಣೆಯಾಗಿವೆ, ಅವು
ಇದ್ದದ್ದು ನಿಜ; ಈಗ ಇಲ್ಲ.

ನನ್ನ ವೈಯುಕ್ತಿಕ ಗೌಪ್ಯ-
ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ,
ನೀವಿಲ್ಲದೆ ನಾನಿಲ್ಲ.

ಹೊಳೆದರೆ ನನ್ನ ಕವಿತೆಗೊಂದು
ಶೀರ್ಷಿಕೆ ಕೊಡುವಿರಾ?

-ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು
—–