ಪೂರ್ಣಚಂದ್ರ ಹಾಡು ಹಾಡಿದ
ಮುಗಿಲಿನ ಬಯಲಾಗ ಕವಿದ ಕತ್ತಲು
ಗಾಢ ಹೊದಿಕಿ ಹೊದಿಸಿ ಸುಮ್ಮ ನಿಂತಿತ್ತ
ಕವಿದ ಕತ್ತಲ ಎದೆಯ ಸೀಳಿ ಚಂದಿರ ಬಂದಿದ್ದ
ಸುತ್ತ ಮುತ್ತ ನೋಡಿದ್ದ ಕಳ್ಳ ನಗೀ ನಕ್ಕಿದ್ದ
ತಿಂಗಳನ್ಬೆಳಕು ಚಿಗುರಿ ಅಲ್ಲಿ ಚೇತರಿಕಿ ತಂದಿತ್ತ
ಬಾನೆತ್ತರಕ ಹರಡಿದ ಕೊಂಬಿ ತುಸುವೆ ಚಲಿಸಿತ್ತ
ಸಣ್ಣಗೆ ಸುಳಿದು ತಂಪು ಗಾಳಿ ಹಾಯಿ ತುಂಬಿತ್ತ
ತಿಳಿಯಧಾಂಗ ಏನೋ ಒಂದು ಜಾದೂ ನಡದಿತ್ತ
ಫಳ್ಳಂತ ಹೊಳೆದ ಚುಕ್ಕಿ ಹೂವ ಬಳ್ಳಿ ಬಳುಕಿತ್ತ
ಮುಗಿಲಿನ ಬಯಲಾಗ ಬೆಳಕಿನ ಹೊಳೀ ಹರಿದಿತ
ಭೂಮಿ ಒಡಲಾಗ ಹಾಲಿನ ಧಾರಿ ಛಲ್ಲಂತ ಚಿಮ್ಮಿತ್ತ
ಚೆಂದುಳ್ಳಿ ಚೆಲುವಿ ಮಾಯಾಧಂಗ ಮಿಂಚಿ ಬಂದಿತ್ತ
ಪೂರ್ಣ ಚಂದಿರ ಕಣ್ಣು ಮಿಟುಕಿಸಿ ಹಾಡ ಗುನುಗಿದ್ದ
ತಂಪು ಬೆಳಕಿನ್ಯಾಗ ಹಿಗ್ಗುತ ಹಕ್ಕಿ ಮೆಲ್ಲಗ ಇಣುಕಿತ್ತ
ಹಾಡಿನ ಗುಂಗು ಸುತ್ತ ಸುತ್ತಿ ಮತ್ತಿನ ಝರಿ ಹರಿಸಿತ್ತ
ಹ್ಯಾಂಗೋ ಏನೋ ಆಶಾ ಕಿರಣ ಹರಿದು ಬಂದಿತ್ತ
ಹೊಸಾ ಲೋಕದ ಬಾಗಿಲು ತಾ ಛಕ್ಕಂತ ತೆರೆದಿತ್ತ
-ಸರೋಜಿನಿ ಪಡಸಲಗಿ
ಬೆಂಗಳೂರು
[ಪೂರ್ಣ ಚಂದ್ರನ ಚಿತ್ರ ಕೃಪೆ: ಸಮಾನ ಮನಸ್ಕರು ಗ್ರೂಫ್]
ಚಂದದ ಚಿತ್ರ, ಅರ್ಥಪೂರ್ಣ ಅನ್ವರ್ಥಕ ಕವಿತೆ. ಪ್ರಾಸ, ಲಯ ಎಲ್ಲ ಪೂರ್ಣ ಚಂದ್ರನಂತೆ ಬೆಳಕು ಚಲ್ಲುತ್ತವೆ! ಶ್ರೀವತ್ಸ.