ಅನುದಿನ ಕವನ-೧೫೦೫, ಕವಯಿತ್ರಿ: ನಂದಿನಿ‌ ಹೆದ್ದುರ್ಗ

ಎಷ್ಟೊಂದು ಪ್ರೇಮಪದ್ಯಗಳಿವೆ
ನನ್ನ ಹಳೆಯ
ಸಂಗ್ರಹದಲ್ಲಿ!
ಅಕ್ಷರಗಳ ಆಕಾರ ಬಣ್ಣ
ನೇವರಿಸಿ
ಭಾವ ನೋವು ಗ್ರಹಿಸಿ
ಬೆವರ ವಾಸನೆ ಅರಸಿ…

ವಿಳಾಸ ಹುಡುಕುವ
ಹುಚ್ಚು ನನಗೆ!!

ಹಣೆಯ ಮೇಲಿದ್ದ
ಹೆರಳು ಸರಿ ಮಾಡಿ
ಸಣ್ಣಗೇನೋ
ಹೇಳಿದವನನ್ನೇ ಮೆಲ್ಲ
ನೋಡಿದೆ.
ಗಲ್ಲ ಹಿಡಿದೆತ್ತಿ
ನೆನಪುಗಳ
ಹರವಿಕೊ ಹುಡುಗಿ ಎಂದ

ಅವನ ನಿಶ್ಚಿಂತ
ನೋಟಕ್ಕೆ ಬೆರಗಾದವಳು
ನಾನು!
ಮುಖ ಸವರಿ ನೆಟಿಕೆ
ಮುರಿದವನ
ಒಲವಿಗೆ ಅಳತೆ
ಏನುಂಟು
ಈ ಲೋಕದಲ್ಲಿ

ಇದು
ಕಾಮನಬಿಲ್ಲೊಂದು
ಕನಸಾಗಿ ಅರಳಿಕೊಳ್ಳುವ
ಕಾಲ
ಮತ್ತು
ಅಡಗಿಸಿದಷ್ಟೂ
ಹೊರಳಿ ಮರಳುವ
ಕೋಲಾಹಲ!

ನೀ

-ನಂದಿನಿ‌ ಹೆದ್ದುರ್ಗ
—–