ಅನುದಿನ ಕವನ-೧೫೧೦, ಹಿರಿಯ ಕವಿ:ಅರುಣಕುಮಾರ‌ ಹಬ್ಬು, ಹುಬ್ಬಳ್ಳಿ

ಹುಟ್ಟು ನಿನ್ನದಲ್ಲ
ಸಾವು ನಿನ್ನದಲ್ಲ
ಬದುಕು ಮಾತ್ರ ನಿನ್ನದು

ನಿನ್ನೆ ನಿನ್ನದಲ್ಲ
ನಾಳೆ ನಿನ್ನದಲ್ಲ
ಇಂದು ಮಾತ್ರ‌ ನಿನ್ನದು

ಕಳೆದುದು ನಿನ್ನದಲ್ಲ
ಬರುವುದೂ ನಿನ್ನದಲ್ಲ
ಗಳಿಸಿದ್ದು ಮಾತ್ರ ನಿನ್ನದು

ಹೆಸರು ನಿನ್ನದಲ್ಲ
ಜೀವ ನಿನ್ನದಲ್ಲ
ಜೀವನ ಮಾತ್ರ ನಿನ್ನದು

ನಿಮ್ಮವರೆಂದುಕೊಳ್ಳುವವರೆಲ್ಲ
ನಿನ್ನವರಲ್ಲ
ಇರಲಾರರು ಯಾರೂ ನಿನ್ನ ಜೊತೆ

ಏಕೆಂದರೆ ಒಂಟಿಯಾಗಿ
ಈ ಭುವಿಗೆ ಬಂದ ನೀನು
ತೆರಳುವುದೂ ಒಂಟಿಯಾಗಿ

ಇರುವವರೆಗೆ ಸಾಧಿಸು
ನಿನ್ನ ಕೈಲಾದುದನು
ಮುಂದೆ ಭೂಪ ಕೇಳೆಂದ

ಯಾರೂ ಬಲ್ಲವರಿಲ್ಲ ಭವಿಷ್ಯವ
ಕಳೆದಿದೆ ನಿನ್ನೆಯದು
ಅರಿಯಲಾಗದು
ವಿಧಿಯ ಕೈವಾಡವ

ಏನೇ ಮಾಡಿದರೂ
ಅರಿತು ಬಾಳುವುದು ಲೇಸು
ಏನಾದರೂ ಆಗು
ಮೊದಲು ಮಾನವನಾಗುವುದು ಲೇಸು

-ಅರುಣಕುಮಾರ‌ ಹಬ್ಬು, ಹುಬ್ಬಳ್ಳಿ
—–