ಅನುದಿನ ಕವನ-೧೫೧೩, ಕವಯಿತ್ರಿ: ಕುಸುಮಾ ಆಯರಹಳ್ಳಿ, ಕವನದ ಶೀರ್ಷಿಕೆ: ಮೌನ ಒಳ್ಳೆಯದು

ಮೌನ ಒಳ್ಳೆಯದು

ಅರ್ಥವಿಲ್ಲದ ಜಗಳಗಳ
ಆಡಿ ಸುಸ್ತಾದಾಗ
ಜಗಳಕ್ಕೂ ಏನೂ
ಉಳಿದಿಲ್ಲ ಅನಿಸಿದಾಗ
ಮೌನ ಒಳ್ಳೆಯದು.

ಪ್ರತಿಸಲವೂ ಪ್ರತಿಯೊಂದಕ್ಕೂ
ವಿವರಣೆ ಕೊಟ್ಟು ಸಾಕಾದಾಗ
ಇನ್ನು ವಿವರಣೆ ಕೊಡಲಿಕ್ಕೂ
ತ್ರಾಣವಿಲ್ಲ ಅನಿಸಿದಾಗ
ಮೌನ ಒಳ್ಳೆಯದು.

ಯಾವ ತಕರಾರು ತೆಗೆಯದೇ
ಬಂದದ್ದಕ್ಕೆಲ್ಲ ಸುಮ್ಮನೆ
ಹೊಂದಿಕೊಂಡುಬಿಡೋಣ ಅನಿಸಿದಾಗ
ಯಾವುದರ ಕುರಿತೂ
ದೂರುವುದು ಬೇಡ ಅನಿಸಿದಾಗ
ಮೌನ ಒಳ್ಳೆಯದು

ಹಳೆಯ ಗಾಯಗಳೂ ಸೇರಿ
ಬೇಡವಾದ ಎಲ್ಲಕ್ಕೂ
ಸಾರಾಸಗಟಾಗಿ
ಮದ್ದರೆಯೋಣ ಅನಿಸಿದಾಗ
ಮೌನ‌ ಒಳ್ಳೆಯದು

ಮೌನವೇ ಒಳ್ಳೆಯದು

ಎಲ್ಲದರಿಂದಲೂ ಸದ್ದಿಲ್ಲದೇ
ಮತ್ತು
ಗೌರವಯುತವಾಗಿ
ಹೊರನಡೆದುಬಿಡೋಣ ಅನಿಸಿದಾಗ

-ಕುಸುಮಾ ಆಯರಹಳ್ಳಿ

—–