ಎರಡು ಸಾಲು
ಗಾಂಧಿಯ ಬಗ್ಗೆ ಎರಡು ಸಾಲು ಬರೆದು ಕೊಡುವಿರಾ ಎಂದವರು ಕೇಳಿದರು-
ನನಗೋ ಏನೇನೋ ತಾಪತ್ರಯ, ತರಲೆಗಳು
ನೂರೆಂಟು ಕೆಲಸಗಳು…
ಬಿಜಿನೆಸ್ಸು ಡಲ್ ಆಗಿದೆ
ಮಗಳಿಗೆ ಸೀಟು ಸಿಕ್ಕಿಲ್ಲ,
ಆಗಾಗ್ಗೆ ಎದೆನೋವು, ಕಿರಿಕಿರಿ,
ತುಂಬಾ ಬ್ಯುಸಿ, ಯಾಕೆ? ಅರ್ಥವಾಗುತ್ತಿಲ್ಲ!
ಪುರುಸೊತ್ತು ಇಲ್ಲವೇ…
ಬರವಣಿಗೆ ಕಷ್ಟ ಎಂದೆಲ್ಲಾ ಹೇಳಿ
ಕೈ ತೊಳೆದುಕೊಂಡೆ….
ಒಳಗೊಳಗೆ ಯೋಚಿಸಿದೆ-
ಅವನು ನನ್ನಂತೆಯೇ….ಮಿಗಿಲಾಗಿ ಮುದುಕ ,ಆರೋಗ್ಯವೂ ಅಷ್ಟಕ್ಕಷ್ಟೇ…
೩೩ ಕೋಟಿ ಜನರನ್ನು ಸಂಭಾಳಿಸಿದನಲ್ಲ…ಹೇಗೆ?
ಎಲ್ಲವ ಮೈಮೇಲೆ ಎಳೆದುಕೊಂಡ ಹೇಗೆ?
ಅಪರಾತ್ರಿಯ ತನಕ ದೇಶವಾಸಿಗಳ
ಕಾಗದಗಳಿಗೆ ಉತ್ತರ ಬರೆಯುತ್ತಿದ್ದನಂತೆ….
ರಾತ್ರಿ ಹಗಲು ನೋವಿಗೆ ಮದ್ದು ಅರೆಯುತ್ತಿದ್ದನಂತೆ….
ಗುಡಿಸುವುದು,ಬಡಿಸುವುದು, ನೂಲುವುದು,ಉಪವಾಸ, ಸತ್ಯಾಗ್ರಹ, ಸೆರೆಮನೆ, ದೇಶದುದ್ದಗಲಕ್ಕೆ ಓಡಾಡಿದನಂತೆ ಯಾರಿಗಾಗಿ?…..ಛೇಛೇ ಮನಸ್ಸು
ಕಳವಳಿಸಿ, ಕುಗ್ಗಿ ಬಗ್ಗಿ ಹೋದೆ…
ಎರಡೇ ಸಾಲು ,ಇಲ್ಲ ಬರೆಯಲಿಲ್ಲ
ಕಷ್ಟ ಬಹಳ ಕಷ್ಟ…
ನನ್ನ ಕೆಲಸಗಳಲ್ಲಿ ಮುಳುಗಿ ಹೋದೆ….ನೆನಪಾಗಲೂ ಇಲ್ಲ…. ಬರೆಯುವಿರಾ ಎಂದವರು ಮತ್ತೊಮ್ಮೆ ಕೇಳಲೂ ಇಲ್ಲ!?
-ಸವಿತಾ ನಾಗಭೂಷಣ, ಶಿವಮೊಗ್ಗ
—–